ಉಭಯ ದೇಶಗಳ ನಡುವೆ ಸೋಮವಾರ ಸಹಿ ಹಾಕಲಾದ ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ ಪಾಲುದಾರಿಕೆಯ ಜಂಟಿ ಉದ್ದೇಶ ಘೋಷಣೆ ಅಡಿಯಲ್ಲಿ, 2030ರವರೆಗೆ ಭಾರತದಲ್ಲಿ 10 ಬಿಲಿಯನ್ ಯುರೋಗಳ ಹೊಸ ಮತ್ತು ಹೆಚ್ಚುವರಿ ಅಭಿವೃದ್ಧಿ ನೆರವನ್ನು ಒದಗಿಸಲು ಜರ್ಮನಿ ಮುಂಗಡ ಬದ್ಧತೆಯನ್ನ ವ್ಯಕ್ತಪಡಿಸಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರ ಯುರೋಪ್ ಭೇಟಿಯ ಮೊದಲ ಹಂತದ ಸಮಾರೋಪದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಅವರು, ಭಾರತ ಮತ್ತು ಜರ್ಮನಿ ನಡುವಿನ ಅಭಿವೃದ್ಧಿ ಸಹಕಾರ ಕಾರ್ಯಸೂಚಿಗೆ ಜೆಡಿಐ ದೀರ್ಘಕಾಲೀನ ಕಾರ್ಯತಂತ್ರದ ದೃಷ್ಟಿಕೋನವನ್ನು ಒದಗಿಸುತ್ತದೆ ಎಂದು ಹೇಳಿದರು.
ಉದ್ದೇಶದ ಈ ಘೋಷಣೆಯು ನಮ್ಮ ಸಂಪೂರ್ಣ ಅಭಿವೃದ್ಧಿ ಸಹಕಾರ ಕಾರ್ಯಸೂಚಿಗೆ ದೀರ್ಘಕಾಲೀನ ಕಾರ್ಯತಂತ್ರದ ದೃಷ್ಟಿಕೋನವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಇನ್ನು ಇದರ ಭಾಗವಾಗಿ ಜರ್ಮನಿ 2030 ರವರೆಗೆ 10 ಬಿಲಿಯನ್ ಯುರೋಗಳ ಹೊಸ ಮತ್ತು ಹೆಚ್ಚುವರಿ ಅಭಿವೃದ್ಧಿ ನೆರವಿನ ಮುಂಗಡ ಬದ್ಧತೆಯನ್ನ ಮಾಡಲು ಒಪ್ಪಿಕೊಂಡಿದೆ ಎಂದು ಕ್ವಾತ್ರಾ ಹೇಳಿದರು.
ಹಸಿರು ಜಲಜನಕ ಮತ್ತು ನವೀಕರಿಸಬಹುದಾದ ವಸ್ತುಗಳ ಸಹಯೋಗಕ್ಕಾಗಿ ಉಭಯ ದೇಶಗಳ ನಡುವೆ ಸಹಿ ಹಾಕಲಾದ ಒಪ್ಪಂದವನ್ನ ವಿದೇಶಾಂಗ ಕಾರ್ಯದರ್ಶಿ ಎತ್ತಿ ತೋರಿಸಿದರು.
ಈ ಕ್ಷೇತ್ರದಲ್ಲಿನ ನಮ್ಮ ಪಾಲುದಾರಿಕೆಯ ಭಾಗವಾಗಿ, ಜರ್ಮನ್ ಬೆಂಬಲದೊಂದಿಗೆ ಭಾರತದಲ್ಲಿ ಹಸಿರು ಹೈಡ್ರೋಜನ್ ಹಬ್ ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯಪಡೆಯು ಕೆಲಸ ಮಾಡಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಮಾಹಿತಿ ನೀಡಿದರು.
ಪ್ರಧಾನಿ ಮೋದಿ ಮತ್ತು ಜರ್ಮನ್ ಚಾನ್ಸಲರ್ ಶೋಲ್ಜ್ ಅವರ ಜಂಟಿ ಹೇಳಿಕೆಯಲ್ಲಿ ಹಸಿರು ಜಲಜನಕ ಪಾಲುದಾರಿಕೆಯ ಬಗ್ಗೆ ಮಾತನಾಡಿದ ಅವರು, ಇಂಡೋ ಜರ್ಮನ್ ಎನರ್ಜಿ ಫೋರಂ ಬೆಂಬಲಿತ ಇಂಡೋ ಜರ್ಮನ್ ಗ್ರೀನ್ ಹೈಡ್ರೋಜನ್ ಟಾಸ್ಕ್ ಫೋರ್ಸ್ನ ಇನ್ಪುಟ್ಗಳ ಆಧಾರದ ಮೇಲೆ ಇಂಡೋ ಜರ್ಮನ್ ಹಸಿರು ಹೈಡ್ರೋಜನ್ ಮಾರ್ಗಸೂಚಿಯನ್ನು 2 ದೇಶಗಳು ಅಭಿವೃದ್ಧಿಪಡಿಸಲಿವೆ ಎಂದು ಹೇಳಿದರು.
ಆರನೇ ಭಾರತ-ಜರ್ಮನಿ ಅಂತರ್ ಸರ್ಕಾರಿ ಸಮಾಲೋಚನೆಯ ಸಂದರ್ಭದಲ್ಲಿ ಸೋಮವಾರ ಭಾರತ ಮತ್ತು ಜರ್ಮನಿ ನಡುವೆ ವಿವಿಧ ಕ್ಷೇತ್ರಗಳಲ್ಲಿ ಒಟ್ಟು 9 ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ 3 ದಿನಗಳ ಯುರೋಪ್ ಭೇಟಿಯ ಮೊದಲ ದಿನವಾದ ಸೋಮವಾರ ಬರ್ಲಿನ್ ಗೆ ಆಗಮಿಸಿದರು.