ಪೊಲೀಸ್ ವಾಲೆ ಬುಲಾ ರಹೆ! ಅಂತ ಕರೆ ಬಂತು. ಮನೆಯಲ್ಲಿದ್ದ ತಂದೆ ತಾಯಿಗಳಿಗೆ ಹೃದಯವೇ ಬಾಯಿಗೆ ಬಂದಂತೆ ಭಯ. ಒಂದು ಕ್ಷಣ ಬೆವತು ಬಿಟ್ಟರು. ಇದ್ದ ಮಗ ಏನು ಮಾಡಿಕೊಂಡನೋ ಏನೋ!. ನೌಕರಿ ಬಗ್ಗೆ ಹೇಳಿ ಕೊಳ್ಳುವಂಥದ್ದಿಲ್ಲ. ಕಂಗಾಲಾದರು ತಂದೆ ತಾಯಿಗಳು.
ಅವರ ಮಗ ಜೈ ಹಲ್ದೆ ದಿನಾಲೂ ರಾತ್ರಿ ಸೈಕಲ್ ತುಳೀತಿದ್ದ.ಅಂದರೆ ಸುಮ್ಮನೆ ಅಲ್ಲ. ಜೊಮಾಟೋ ಕಂಪನಿಯ ಆಹಾರದ ಪೊಟ್ಟಣಗಳನ್ನ ಮನೆಮನೆಗೆ ತಲುಪಿಸುತ್ತಿದ್ದ. ಅಲ್ಲೇನಾದರೂ ಹೆಚ್ಚು ಕಮ್ಮಿ ಆಯ್ತ?ಅಂತ ಚಿಂತೆ.
ದಿನಾ ರಾತ್ರಿ ಸೈಕಲ್ ತುಳಿದು ಹೋಗುತ್ತಿದ್ದ ಜೈ ಹಲ್ದೆ ಯನ್ನ ಒಂದು ರಾತ್ರಿ
ಸೈಕಲ್ ಹಿಡಿದು ಪೋಲಿಸ್ ಖಾಜಿ ಎನ್ನುವವರು ನೀನು ದಿನಾಲೂ ರಾತ್ರಿಯೇ ಸೈಕಲ್ ತುಳೀಬೇಕ? ಬೆಳಿಗ್ಗೆ ಹಂಚಬಾರ್ದ? ಅಂತ ಕೇಳಿದರು.
ನನ್ನ ಹತ್ರ ಬೈಕ್ ಕೊಳ್ಳೋಕೆ ಆಗಲ್ಲ .ಸೈಕಲ್ಲೇ ಆಧಾರ ಅಂತ.
ಆತ ಬಡತನದಬಗ್ಗೆ ಹೇಳಿಕೊಂಡ. ಪೋಲಿಸ್ ಖಾಜಿ ಸುಮ್ಮನೆ ಕೂರಲಿಲ್ಲ.ಪೋಲಿಸ್ ಠಾಣೆಗೆ ಬಂದು.ಸಹೋದ್ಯೋಗಿಗಳ ಬಳಿ ಈ ಪ್ರಸಂಗದ ಬಗ್ಗೆ ಮಾತಾಡಿದರು. ಅದೇನು ಅದೃಷ್ಟವೋ ಏನೋ ಹಲ್ದೆಗೆ ಹೇಗಾದರೂ ಸಹಾಯ ಮಾಡಬೇಕು ಅಂತ ಎಲ್ಲರೂ ನಿಶ್ಚಯಿಸಿದರು.
ಎಲ್ಲರೂ ಒಂದುಷ್ಟು ಹಣ ಕೂಡಿಸಿದರು.ಒಂದು ಬೈಕ್ ಕೊಳ್ಳುವಷ್ಟು ಸಂಗ್ರಹವಾಯಿತು.ಬೈಕನ್ನೂ ಖರೀದಿಸಿ ತಂದರು. ಜೈ ಹಲ್ದೆ ಮನೆಗೆ ಹೇಳಿ ಕಳಿಸಿದರು.
ತಂದೆತಾಯಿಗಳು ಗಡಿಬಿಡಿಯಿಂದ ಪೋಲಿಸ್ ಠಾಣೆಗೆ ಬಂದರು.ಅಲ್ಲಿನ ಪರಿಸ್ಥಿತಿ ನೋಡಿದಾಗ ಅವರ ಆನಂದಕ್ಕೆ ಪಾರವೇ ಇಲ್ಲ. ಪೋಲಿಸರ ನೆರವಿಗೆ
ಕೃತಜ್ಞತೆ ಹೇಳಿದರು.ಯುವಕ ಹಲ್ದೆ ಸ್ವಾಭಿಮಾನಿ. ಅದರ ಹಣವನ್ನ ಕಂತುಗಳಲ್ಲಿ ತೀರಿಸುತ್ತೇನೆ ಎಂದು ಹೇಳಿದ.
ಇಂದೋರ್ ನ ವಿಜಯನಗರ ಪೋಲಿಸ್ ಠಾಣೆಯ ಪೊಲೀಸರ ನಡವಳಿಕೆ ಮಾನವೀಯತೆಗೆ ಒಂದು ಮಾದರಿ.