ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ದುರಾಡಳಿತವು, ಒಂದು ಕಾಲದಲ್ಲಿ ವಿಶ್ವದ ಅತಿ ವೇಗದ ಆರ್ಥಿಕತೆಗಳಲ್ಲಿ ಒಂದಾಗಿದ್ದ ದೇಶದ ಆರ್ಥಿಕತೆಯನ್ನು ಹೇಗೆ ಹಾಳು ಮಾಡಬಹುದು ಎಂಬುದರ ಅಧ್ಯಯನವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಬೇಸಿಗೆಯಲ್ಲಿ ಅತಿಹೆಚ್ಚು ಬೇಡಿಕೆಯಿರುವ ವಿದ್ಯುತ್ ಮತ್ತು ಕಲ್ಲಿದ್ದಲು ಕೊರತೆ ತೀವ್ರವಾಗಿರುವ ನಡುವೆಯೇ, ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಟ್ವಿಟರ್ ಮೂಲಕ ತಮ್ಮ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ನಿನ್ನೆ ಸೋಮವಾರ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಅವರು, ವಿದ್ಯುತ್ ಬಿಕ್ಕಟ್ಟು. ಉದ್ಯೋಗಗಳ ಬಿಕ್ಕಟ್ಟು, ರೈತರ ಬಿಕ್ಕಟ್ಟು. ಹಣದುಬ್ಬರದ ಬಿಕ್ಕಟ್ಟು. ಪ್ರಧಾನಿ ಮೋದಿ ಅವರ 8 ವರ್ಷಗಳ ದುರಾಡಳಿತವು ವಿಶ್ವದ ವೇಗದ ಆರ್ಥಿಕತೆಗಳಲ್ಲಿ ಒಂದಾಗಿದ್ದ ದೇಶದ ಆರ್ಥಿಕತೆಯನ್ನು ಹೇಗೆ ಹಾಳು ಮಾಡಬಹುದು ಎಂಬುದರ ಅಧ್ಯಯನವಾಗಿದೆ ಎಂದು ಮೋದಿ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.