ಅಕ್ಷಯ ತೃತೀಯ ಎಂದರೆ ಅಕ್ಷಯ ತದಿಗೆಯ ವೈಶಾಖದ ಶುಕ್ಲಪಕ್ಷದ ಮೂರನೇ ದಿನ. ಇಂದು ನಾವು ಅಕ್ಷಯ ತೃತೀಯವನ್ನು ಎಲ್ಲೆಡೆ ಆಚರಿಸುತ್ತಿದ್ದೇವೆ.
ಅಕ್ಷಯ ತೃತೀಯ ಎಂದಾಕ್ಷಣ ನಮಗೆ ನೆನಪಾಗುವುದು ಬಂಗಾರದ ಮಳಿಗೆಗಳು. ಅದರಲ್ಲೂ ಮಹಿಳೆಯರಂತೂ ಬಂಗಾರ ಕೊಂಡುಕೊಳ್ಳುವಲ್ಲಿ ಈ ದಿನ ಬ್ಯುಸಿ ಆಗಿಬಿಡುತ್ತಾರೆ.
ಭಾರತವು ವೈವಿಧ್ಯತೆಗಳ ಬೀಡು. ಹಿಂದೂಗಳಲ್ಲಿ ಅನೇಕ ಹಬ್ಬಗಳಿವೆ. ಅದರಲ್ಲಿ ಅಕ್ಷಯತೃತೀಯ ಕೂಡ ಒಂದಾಗಿದೆ. ಈ ಹಬ್ಬವು ಅದೃಷ್ಟ ಮತ್ತು ಯಶಸ್ಸನ್ನು ತರುತ್ತದೆ ಎಂಬ ನಂಬಿಕೆ ಇದೆ.
ಹಾಗಾದ್ರೆ, ಅಕ್ಷಯ ತೃತೀಯದ ಮಹತ್ವವೇನು ಎಂಬುದನ್ನು ತಿಳಿದುಕೊಳ್ಳೋಣ.
ಹಿಂದೂ ಪುರಾಣಗಳ ಪ್ರಕಾರ ತ್ರೇತಾಯುಗ ಅಕ್ಷಯತೃತಿಯ ದಿನವೇ ಆರಂಭವಾಯಿತು.ಹಾಗೂ ಅಕ್ಷಯ ತೃತೀಯ ದ್ರೌಪದಿಗೆ ಶ್ರೀಕೃಷ್ಣ ಅಕ್ಷಯ ಪಾತ್ರೆಯನ್ನು ಕರುಣಿಸಿದ ದಿನವೆಂದೂ ಪ್ರತೀತಿ. ಈ ದಿನದಂದು ಎಲ್ಲರೂ ಚಿನ್ನ, ಬೆಳ್ಳಿ ವಸ್ತುಗಳನ್ನು ಖರೀದಿಸುತ್ತಾರೆ. ಕಾರಣ ಏನು ಎಂದರೆ ಬಂಗಾರವನ್ನು ಕೊಂಡು ಕೊಳ್ಳುವುದರಿಂದ ಭವಿಷ್ಯದಲ್ಲಿ ಅದು ದುಪ್ಪಟ್ಟಾಗುತ್ತದೆ. ಅಥವಾ ಹೆಚ್ಚಾಗುತ್ತಿದೆ ಎಂಬ ನಂಬಿಕೆಯಿದೆ. ಆದ್ದರಿಂದ ಎಲ್ಲರೂ ಹೆಚ್ಚು ಹೆಚ್ಚು ಚಿನ್ನದ ಆಭರಣಗಳನ್ನು ಕೊಂಡುಕೊಳ್ಳಲು ಬಯಸುತ್ತಾರೆ.
ಈ ದಿನದಂದು ದಾನ, ಯಜ್ಞಗಳನ್ನು, ಶುಭ ಕಾರ್ಯಗಳನ್ನು ಮಾಡುವುದರಿಂದ ವ್ಯಕ್ತಿಯು ಜೀವನದಲ್ಲಿ ಒಳ್ಳೆಯ ಫಲಿತಾಂಶಗಳನ್ನು ಪಡೆಯುತ್ತಾನೆ. ಮತ್ತು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ ಎಂಬ ಪ್ರತೀತಿ ಇದೆ. ಅಕ್ಷಯ ತೃತೀಯ ದಿನದಂದು ವಿಶೇಷವಾಗಿ ಮಹಾವಿಷ್ಣುವಿನ ಪೂಜೆ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಸೂರ್ಯ ಹಾಗೂ ಚಂದ್ರ ಏಕಕಾಲದಲ್ಲಿ ಅತ್ಯುಚ್ಛ ಪ್ರಮಾಣ ತಲುಪಿ ಉಚ್ಚ ರಾಶಿಯಲ್ಲಿ ಉಜ್ವಲತೆ ಉಂಟಾಗುವುದರಿಂದ ಎಲ್ಲಾ ಶುಭಕಾರ್ಯಗಳಿಗೆ ಪ್ರಶಸ್ತವಾಗಿರುತ್ತದೆ. ಸೂರ್ಯ ಆತ್ಮ ಮತ್ತು ದೇಹಕಾರಕ, ಚಂದ್ರ ಮನಸ್ಸುಕಾರಕ. ದೇಹ ಮತ್ತು ಮನಸ್ಸು ಪರಿಪೂರ್ಣತೆಯನ್ನು ಹೊಂದುವ ದಿನವಾಗಿದೆ. ಆದ್ದರಿಂದ ಈ ದಿನವನ್ನು ಶುಭದಿನ ಎಂದು ಕೂಡ ಕರೆಯಲಾಗುತ್ತದೆ.
ಈ ಸಲದ ಅಕ್ಷಯ ತೃತೀಯ ಹಬ್ಬವನ್ನು ಆಚರಿಸುತ್ತಾ, ಬಡವರಿಗೆ ಒಂದಿಷ್ಟು ನಿಮ್ಮ ಕೈಲಾದ ಸಹಾಯ ಮಾಡಿ. ನೀವು ಸಂತೋಷದಿಂದ ಹಬ್ಬವನ್ನು ಆಚರಿಸಿ, ಇನ್ನೊಬ್ಬರಿಗೆ ನಿಮ್ಮ ಸಂತೋಷವನ್ನು ಹಂಚಿ. ಈ ಸಲದ ಅಕ್ಷಯ ತೃತೀಯ ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಒಳಿತು ಮಾಡಲಿ ಎಂದು ನಮ್ಮ ಕೆಲೈವ್ ಬಳಗ ಹಾರೈಸುತ್ತದೆ.