ಮಹೇಂದ್ರ ಸಿಂಗ್ ಧೋನಿ ಮತ್ತೆ ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವು ಸಾಧಿಸಿತ್ತು. ಐಪಿಎಲ್ ನ 46ನೇ ಪಂದ್ಯದಲ್ಲಿ ಎದುರಾಳಿ ಹೈದರಾಬಾದ್ ಗೆ 13 ರನ್ ಗಳಿಂದ ಸೋಲಿನ ರುಚಿ ತೋರಿಸಿದ ಚೆನ್ನೈ, ಒಟ್ಟಾರೆ 9 ಪಂದ್ಯಗಳಲ್ಲಿ ಮೂರನೇ ಗೆಲುವು ದಾಖಲಿಸಿ 6 ಅಂಕ ಸಂಪಾದಿಸಿತು ಆದ್ಯಾಗೋ ಅಂಕಪಟ್ಟಿಯಲ್ಲಿ 9ನೇ ಸ್ಥಾನದಿಂದ ಮೆಲಕ್ಕೇರಲಿಲ್ಲ.
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ನಲ್ಲಿ ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಋತುರಾಜ ಗಾಯಕ್ವಾಡ್ (99 ರನ್ , 57 ಎಸೆತ, 6 ಫೋರ್, ಆರು ಸಿಕ್ಸರ್) ಹಾಗೂ ಡೇವೊನ್ ಕಾನ್ವ (85 ರನ್, 55 ಎಸೆತ, 8 ಫೋರ್, ಆರು ಸಿಕ್ಸರ್) ಅವರ ಅರ್ಧಶತಕಗಳ ನೆರವಿನಿಂದ ಚೆನ್ನೈ ತಂಡ ನಿಗದಿತ 20 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 202 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡ ತನ್ನ ಪಾಲಿನ 20 ಓವರ್ ಗಳು ಪೂರ್ಣಗೊಂಡಾಗ ಆರು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಲಷ್ಟೇ ಶಕ್ತವಾಯಿತು.
ನಿಕೋಲಸ್ ಪೋರನ್ 33 ಎಸೆತಗಳಲ್ಲಿ 64 ರನ್ ಬಾರಿಸಿ ಗೆಲುವು ತಂದುಕೊಡಲು ಯತ್ನಿಸಿದರು ಆದರೆ ಅವರಿಗೆ ಯಶಸ್ಸು ದೊರೆಯಲಿಲ್ಲ.
ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡಕ್ಕೆ ಆರಂಭಿಕರಾದ ಡೇವೊನ್ ಹಾಗೂ ಋತುರಾಜ ಉತ್ತಮ ಆರಂಭ ಒದಗಿಸಿಕೊಟ್ಟರು. ಈ ಜೋಡಿ 182 ರನ್ ಬಾರಿಸುವ ಮೂಲಕ ಆವೃತ್ತಿಯಲ್ಲಿ ಮೊದಲ ವಿಕೆಟ್ ಗೆ ಗರಿಷ್ಠ ರನ್ ಗಳ ಜೊತೆಯಾಟ ವಾಡಿದ ಹೆಗ್ಗಳಿಕೆಗೆ ಪಾತ್ರವಾಯಿತು. ಆದರೆ, 99ರನ್ ಬಾರಿಸಿ ನಟರಾಜನಿಗೆ ವಿಕೆಟ್ ಒಪ್ಪಿಸಿದ ಗಾಯಕ್ವಾಡ್ ಕೇವಲ ಒಂದು ರನ್ ನಿಂದ ಶತಕ ವಂಚಿತರಾದರು. ಕಾನ್ವೆ 85 ರನ್ ಬಾರಿಸಿ ಅಜೇಯರಾಗಿ ಉಳಿದರು.