ದೇಶದ ಜನರಿಗೆ ಬೆಲೆ ಏರಿಕೆಯ ಬಿಸಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂದು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 102.50 ರೂಪಾಯಿ ಏರಿಕೆ ಮಾಡಲಾಗಿದೆ. ಇದರಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 2,335.50 ರೂಪಾಯಿಗೆ ಏರಿಕೆಯಾಗಿದೆ.
ಫೆಬ್ರವರಿ 1ರ ಬಜೆಟ್ ದಿನದಂದು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರಿನ ಬೆಲೆಯಲ್ಲಿ 91.50 ರೂಪಾಯಿ ಇಳಿಕೆ ಕಂಡಿತ್ತು. ಈ ವೇಳೆ ದೆಹಲಿಯಲ್ಲಿ 19 ಕೆಜಿ ಸಿಲಿಂಡರಿನ ಬೆಲೆ 1907 ರೂಪಾಯಿ ಇತ್ತು.
ಇದಾದ ನಂತರ ಮಾರ್ಚ್ 1ರಂದು ಎಲ್ಪಿಜಿ ಸಿಲಿಂಡರಿನ ಬೆಲೆ 105 ರೂ. ಏರಿಕೆ ಕಂಡು, 19 ಕೆಜಿ ಸಿಲಿಂಡರಿನ ಬೆಲೆ 2012 ರೂಪಾಯಿ ಆಗಿತ್ತು.
ಏಪ್ರಿಲ್ 1ರಂದು ಮತ್ತೆ ದರ ಏರಿಕೆಯಾಗಿತ್ತು. ಬರೋಬ್ಬರಿ 250 ರೂಪಾಯಿ ಏರಿಕೆಯಾಗಿ, 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 2,253 ರೂಪಾಯಿ ತಲುಪಿತ್ತು. ಈಗ ಮೇ 1ರ ಕಾರ್ಮಿಕ ದಿನದಂದು ಕೂಡ ವಾಣಿಜ್ಯ ಬಳಕೆಯ ಸಿಲಿಂಡರ್ನ ಬೆಲೆಯಲ್ಲಿ 102.50 ರೂಪಾಯಿ ಏರಿಕೆಯಾಗಿದೆ.