ಇನ್ನು ಮುಂದಿನ 10 ವರ್ಷಗಳಲ್ಲಿ ದಾಖಲೆ ಮಟ್ಟದಲ್ಲಿ ಹೊಸ ವೈದ್ಯರನ್ನು ದೇಶ ಹೊಂದಲಿದೆ ಎಂದು ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ಗುಜರಾತ್‌ನ ಭುಜ್ ಜಿಲ್ಲೆಯಲ್ಲಿರುವ ಕೆಕೆ ಪಟೇಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಿನ್ನೆ ಉದ್ಘಾಟನೆ ಮಾಡಿದ್ದಾರೆ.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಅವರು, ಕೇಂದ್ರ ಸರ್ಕಾರದ ಹೊಸ ನೀತಿಯ ಅನುಸಾರ ದೇಶದ ಪ್ರತಿಯೊಂದು ಜಿಲ್ಲೆಗಳಲ್ಲೂ ಕನಿಷ್ಟ ಒಂದು ವೈದ್ಯಕೀಯ ಕಾಲೇಜುಗಳನ್ನ ಸ್ಥಾಪಿಸುವ ಗುರಿ ಹೊಂದಿದೆ. ವೈದ್ಯಕೀಯ ಶಿಕ್ಷಣ ಎಲ್ಲರಿಗೂ ದೊರೆಯಬೇಕು ಎಂಬ ಉದ್ದೇಶದಿಂದ ಈ ಪ್ರಯತ್ನಕ್ಕೆ ಮುಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಗುಜರಾತ್ ಎರಡು ದಶಕಗಳ ಹಿಂದೆ ಒಂಬತ್ತು ವೈದ್ಯಕೀಯ ಕಾಲೇಜುಗಳನ್ನು ಹೊಂದಿತ್ತು. ಅದರಲ್ಲಿ ಕೇವಲ 1100 ಸೀಟುಗಳು ಮಾತ್ರ ಇತ್ತು. ಆದರೆ, ಕಳೆದ 20 ವರ್ಷಗಳಲ್ಲಿ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಪ್ರಸ್ತುತ ಗುಜರಾತ್‌ನಲ್ಲಿ 36ಕ್ಕೂ ಅಧಿಕ ವೈದ್ಯಕೀಯ ಕಾಲೇಜುಗಳಿದೆ. ಪ್ರತಿವರ್ಷ 6000 ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಈ ಮೂಲಕ ಯುವಜನತೆಗೆ ವೈದ್ಯಕೀಯ ಶಿಕ್ಷಣವನ್ನು ಮುಕ್ತವಾಗಿ ಪಡೆಯಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆಯಲ್ಲಿ 2001ರಲ್ಲಿ ಉಂಟಾಗಿದ್ದ ಭೀಕರ ಭೂಕಂಪನದ ವಿನಾಶದ ಕುರಿತು ಪ್ರಧಾನಿ ಅವರು ನೆನಪು ಮಾಡಿಕೊಂಡರು. ಆಗಿನ ಸ್ಥಿತಿಯನ್ನು ಎದುರಿಸಿ ಭುಜ್ ಹಾಗೂ ಕಚ್‌ನ ಜನರು ತಮ್ಮ ಪರಿಶ್ರಮದಿಂದ ತಮ್ಮ ಪ್ರದೇಶವನ್ನು ಕಟ್ಟಿದ್ದಾರೆ ಎಂದು ಹೇಳಿದರು. ಭುಜ್ ನಲ್ಲಿ ಸ್ಥಾಪಿಸಿರುವ ವೈದ್ಯಕೀಯ ಆಸ್ಪತ್ರೆ ಜನರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲಿದೆ ಎಂದು ಒತ್ತಿ ತಿಳಿಸಿದರು.
ಕೆಕೆ ಪಟೇಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನ ಶ್ರೀ ಕುಟ್ಚಿ ಲೇವಾ ಪಟೇಲ್ ಸಮಾಜ ನಿರ್ಮಿಸಿದೆ. 200 ಹಾಸಿಗೆಯನ್ನು ಹೊಂದಿರುವ ಈ ಆಸ್ಪತ್ರೆಯಲ್ಲಿ ಬಡವರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನ ಕಡಿಮೆ ದರದಲ್ಲಿ ನೀಡಲಿದೆ ಎಂದು ಮಾಹಿತಿ ನೀಡಿದ್ದಾರೆ.