ಕಮಿಷನ್ ವಿಚಾರವಾಗಿ ಈಶ್ವರಪ್ಪ ರಾಜಿನಾಮೆ ಘೋಷಿಸಿದ್ದಾರೆ. ಇದೊಂದೇ ವಿಕೆಟ್ ಅಲ್ಲ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಿದರೆ ಸರ್ಕಾರದ ಅರ್ಧ ಕ್ಯಾಬಿನೆಟ್ ಖಾಲಿಯಾಗುತ್ತದೆ ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಭ್ರಷ್ಟಾಚಾರ ಎನ್ನುವುದು ಪ್ರತಿ ಇಲಾಖೆಯಲ್ಲಿ ಇದೆ. ಇದನ್ನು ಬೇರು ಸಮೇತ ಕಿತ್ತೊಗೆಯಬೇಕಿದೆ ಎಂದರು.
ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ 2019- 20 ಹಾಗೂ 20-21 ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಬೋರ್ ವೆಲ್ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರ ವಿಚಾರ ತನಿಖೆಯಾಗುತ್ತಿದೆ. ಆದರೆ ಕೆಲಸ ಇನ್ನೂ ನಡೆಸಿಲ್ಲ ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿಗೆ ಕಿಕ್ ಬ್ಯಾಕ್ ಹೋಗಿದೆ ಎಂದು ಆರೋಪಿಸಿದರು.
ಸಮಾಜ ಕಲ್ಯಾಣ ಇಲಾಖೆ ಯಲ್ಲಿ 14,530 ಬೋರ್ ವೆಲ್ ಗೆ 431 ಕೋಟಿ ರೂಪಾಯಿ ಮೊತ್ತದ ಟೆಂಡರ್ ಕರೆಯಲಾಗಿತ್ತು. ಐಟಿ ರಿಟರ್ನ್ ಫೇಕ್ ಮಾಡಲಾಗಿದೆ ಎಂಬ ಆರೋಪ ಮಾಡಿದ್ದೆವು.
ಸದನದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದೆವು. ಇಲಾಖೆಯಿಂದ ತನಿಖೆಗೆ ನಿವೃತ್ತ ಇಂಜಿನಿಯರ್ ನೇತೃತ್ವದ ತನಿಖೆಗೆ ಸೂಚನೆ ನೀಡಲಾಗಿತ್ತು. ಅದರ ವರದಿ ಇಂದು ಬರಬೇಕಿತ್ತು. ಆದರೆ 15 ದಿನಗಳಲ್ಲಿ ತನಿಖೆ ಆಗಬೇಕು ಎಂದರೂ ಇನ್ನೂ ಬೋರ್ ವೆಲ್ ಕೆಲಸ ನಿಂತಿಲ್ಲ. ದೇವರಾಜ ಅರಸ್ ನಿಗಮದಲ್ಲಿ ಒಂದು ಬೋರ್ ವೆಲ್ ಗೆ 93 ಲಕ್ಷ ಬಿಲ್ ಮಾಡಲಾಗುತ್ತಿದೆ. ಆದರೆ ಅಂಬೇಡ್ಕರ್, ಆದಿ ಜಾಂಬವ ನಿಗಮದಲ್ಲಿ ಬೋರ್ ವೆಲ್ 1.83 ಲಕ್ಷ ಇದೆ. ಯಾವುದೇ ತನಿಖೆ ಆಗಬೇಕಾದರೆ ಮೊದಲು ಕೆಲಸ ನಿಲ್ಲಿಸಬೇಕು. ಲೋಪ ಆಗಿಲ್ಲ ಎಂದ ನಂತರ ಕೆಲಸ ಆರಂಭಿಸಬೇಕು. ಆದರೆ ಕೆಲಸ ಏಕೆ ನಿಲ್ಲಿಸಿಲ್ಲ? ಕೋಟಾ ಶ್ರೀನಿವಾಸ್ ಪೂಜಾರಿ ತನಿಖಾ ವರದಿ ಕೊಡಿ, ಲೋಪ ಕಂಡು ಬಂದರೆ ಬಿಲ್ ಕೊಡಲ್ಲ ಎಂದಿದ್ದಾರೆ. ಇದರ ಅರ್ಥ ಏನು?. ಹಾಗಾದರೆ ಗುತ್ತಿಗೆದಾರರು ಸುಮ್ಮನಿರುತ್ತಾರಾ? ನ್ಯಾಯಾಲಯಕ್ಕೆ ಹೋಗುತ್ತಾರೆ. ಇದರಲ್ಲಿ ಕಿಕ್ ಬ್ಯಾಕ್ ಹೋಗಿದೆ ಅದಕ್ಕೆ ಕೆಲಸ ನಿಂತಿಲ್ಲ ಎಂಬ ಅನುಮಾನ ಇದೆ ಎಂದರು.
ಇದು ತನಿಖೆಯಾದರೆ ಮಾಜಿ ಸಚಿವರ ಹಾಗೂ ಹಾಲಿ ಸಚಿವರ ವಿಕೆಟ್ ಬೀಳುತ್ತೆ ಎಂದರು.