ಇದೇ ತಿಂಗಳು 16 ಹಾಗೂ 17 ರಂದು ಹೊಸಪೇಟೆಯಲ್ಲಿ ನಡೆಯುವ ಬಿಜೆಪಿ ಕಾರ್ಯಕಾರಿಣಿ ಸಭೆ ಹಲವು ಕಾರಣಗಳಿಂದ ಈಗ ಮಹತ್ವ ಪಡೆದುಕೊಂಡಿದೆ. ” ಹೊಸ ನೀರು, ಹೊಸ ನೀತಿ” ಯ ಹರಿವಿಗೆ ಈ ಸಭೆ ನಾಂದಿ ಹಾಡಲಿದೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಪಕ್ಷಕ್ಕೆ ಸಂಪೂರ್ಣ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಈ ಸಭೆ ಮಹತ್ವದ ಪಾತ್ರ ವಹಿಸಲಿದೆ.
ಈ ಕಾರ್ಯಕಾರಿಣಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ. ಮುಂದಿನ ಚುನಾವಣೆ ಎದುರಿಸಲು ಪಕ್ಷದ ಅಜೆಂಡಾ ಏನು ? ಎಂಬುದರ ಬಗ್ಗೆಯೂ ಈ ಸಭೆಯಲ್ಲಿ ಸುಳಿವು ದೊರಕಲಿದೆ.
ಮುಂದಿನ ಚುನಾವಣೆ ದೃಷ್ಟಿಯಿಂದ ಪಕ್ಷದ ಇಮೇಜ್ ಬದಲಾಯಿಸುವುದು ಅನಿವಾರ್ಯ ಎಂಬುದು ಬಿಜೆಪಿ ವರಿಷ್ಠರ ಅಭಿಪ್ರಾಯವಾಗಿದೆ.
ರಾಜ್ಯ ಘಟಕದ ಒಟ್ಟಾರೆ ವಿದ್ಯಮಾನ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ನಿರೀಕ್ಷೆಯಂತೆ ಇಲ್ಲ. ಜಾತಿವಾದ, ವಂಶವಾದ ಹಾಗೂ ಭ್ರಷ್ಟಾಚಾರದ ವಿರುದ್ಧ ಪಕ್ಷ ನಿಲ್ಲಬೇಕೆಂಬ ರಾಷ್ಟ್ರೀಯ ನಾಯಕರ ಧೋರಣೆಗೆ ಮೊದಲ ಅಡ್ಡಿ ಕರ್ನಾಟಕದಿಂದಲೇ ಎದುರಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿವೆ.