ಚೀನಾದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಅನಿಶ್ಚಿತತೆ ಎದುರಿಸುತ್ತಿದ್ದಾರೆ. ಹೀಗಾಗಿ ಸಂಸದೆ ಎನ್ ಸಿಪಿ ಸುಪ್ರಿಯಾ ಸುಳೆ ಅವರು ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತೆ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಈ ಪತ್ರವನ್ನು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಸುಳೆ, ಚೀನಾ ವಿಶ್ವವಿದ್ಯಾಲಯಗಳಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಗಳು ಕೊರೊನಾ ನಂತರ ಭಾರತದಲ್ಲೇ ಇದ್ದಾರೆ.
‘ನಾನು ಚೀನಾದಲ್ಲಿನ ಭಾರತೀಯ ವಿದ್ಯಾರ್ಥಿಗಳ ನಿಯೋಗ ಹಾಗೂ ವಿದೇಶಿ ವೈದ್ಯಕೀಯ ಪದವೀಧರ ಪೋಷಕರ ಸಂಘದೊಂದಿಗೆ ಮಾತನಾಡಿದ್ದೇನೆ. ಅವರು ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅವುಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳಿಗೆ ಸಹಾಯ ಮಾಡಿ. ‘ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
‘ಗಡಿಯನ್ನು ಮತ್ತೆ ತೆರೆಯುವ ಹಾಗೂ ಪ್ರಯಾಣದ ನಿರ್ಬಂಧಗಳನ್ನು ಸಡಿಲಗೊಳಿಸುವ ವಿಷಯದ ಅನಿಶ್ಚಿತತೆಯ ಬಗ್ಗೆ ನಾವು ಹಾಗೂ ನಮ್ಮ ಪೋಷಕರು ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಒತ್ತಡಕ್ಕೊಳಗಾಗಿದ್ದೇವೆ. ಚೀನಾಕ್ಕೆ ಹಿಂತಿರುಗುವವರೆಗೂ ಚೀನಾದ ವೈದ್ಯಕೀಯ ಪಠ್ಯಕ್ರಮಕ್ಕೆ ತಕ್ಕಂತೆ ಭಾರತದಲ್ಲೇ ತರಗತಿ ಹಾಗೂ ಪ್ರಾಯೋಗಿಕ ತರಗತಿಗಳನ್ನು ಆರಂಭಿಸಿ ಅಥವಾ ಶೀಘ್ರದಲ್ಲಿ ಚೀನಾಕ್ಕೆ ಮರಳಲು ಸಹಾಯ ಮಾಡಿ’ ಎಂದು ವಿದ್ಯಾರ್ಥಿಗಳು ಪತ್ರಮುಖೇನ ಸುಪ್ರಿಯಾ ಸುಳೆ ಅವರಿಗೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಸುಳೆ ಮಾಂಡವಿಯಾ ಅವರಿಗೆ ಪತ್ರ ಬರೆದಿದ್ದಾರೆ.
ಭಾರತ-ಚೀನಾ ಗಡಿಯನ್ನು ಮತ್ತೆ ತೆರೆಯುವ ಹಾಗೂ ಪ್ರಯಾಣದ ನಿರ್ಬಂಧಗಳನ್ನು ಸಡಿಲಗೊಳಿಸುವ ವಿಷಯದ ಅನಿಶ್ಚಿತತೆಯ ಬಗ್ಗೆ ಕಂಗಾಲಾಗಿದ್ದಾರೆ. ಈಗ ಈ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ವಿದ್ಯಾರ್ಥಿಗಳು ಚೀನಾದ ವಿಶ್ವವಿದ್ಯಾಲಯಗಳಲ್ಲಿ ಭೌತಿಕವಾಗಿ ತರಗತಿಗಳಿಗೆ ಹಾಜರಾಗುವವರೆಗೂ ಭಾರತದಲ್ಲೇ ಅವರಿಗೆ ಆಫ್‌ಲೈನ್ ತರಗತಿ ಹಾಗೂ ಪ್ರಾಯೋಗಿಕ ತರಗತಿಗಳನ್ನು ಆರಂಭಿಸಲು ಅವಕಾಶ ಮಾಡಿಕೊಡಬೇಕು ಎಂದು ಮಾಂಡವಿಯಾ ಅವರ ಸಹಾಯವನ್ನು ಆಕ್ಷೇಪಿಸಿದ್ದಾರೆ.
ಕೆಲವು ದಿನಗಳ ಹಿಂದೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ತಮ್ಮ ಚೀನಾ ಸಹವರ್ತಿ ವಾಂಗ್ ಯಿ ಅವರಿಗೆ, ಭಾರತೀಯ ವಿದ್ಯಾರ್ಥಿಗಳು ಚೀನಾದಲ್ಲಿ ಮರಳಿ ತಮ್ಮ ವಿದ್ಯಾಭ್ಯಾಸ ಪ್ರಾರಂಭಿಸಲು ಅವಕಾಶ ಮಾಡಿಕೊಡಬೇಕು ಎಂದು ಕೇಳಿದ್ದರು. ಬಳಿಕ ಬೀಜಿಂಗ್ ತಾರತಮ್ಯ ರಹಿತ ವಿಧಾನವನ್ನು ಅನುಸರಿಸಬಹುದು ಎಂದು ತಿಳಿಸಿದ್ದರು.