ತನ್ನ ಗುರಿಗಳನ್ನು ಈಡೇರಿಸಿಕೊಳ್ಳುವವರೆಗೆ ಉಕ್ರೇನ್‌ನಲ್ಲಿ ರಷ್ಯಾ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರೆಸಲಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ರಷ್ಯಾದ ಪೂರ್ವ ಭಾಗದಲ್ಲಿರುವ ವೊಸ್ಟೊಚ್ನಿ ಬಾಹ್ಯಾಕಾಶ ಉಡ್ಡಯನ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನಿಗದಿತ ಗುರಿಗಳನ್ನು ತಲುಪುವವರೆಗೆ ಮಿಲಿಟರಿ ಕಾರ್ಯಾಚರಣೆಯು ಮುಂದುವರಿಯುತ್ತದೆ ಎಂದು ಹೇಳಿದರು.
ಯೋಜನೆಯ ಪ್ರಕಾರವೇ ಈಗ ಕಾರ್ಯಾಚರಣೆ ನಡೆಯುತ್ತಿದೆ.
ಜೀವ ಹಾನಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ರಷ್ಯಾ ವೇಗವಾಗಿ ಕಾರ್ಯಾಚರಣೆ ಕೈಗೊಂಡಿಲ್ಲ ಎಂದು ಅವರು ಹೇಳಿದರು.
ಇಸ್ತಾನ್‌ಬುಲ್‌ನಲ್ಲಿ ರಷ್ಯಾದ ಸಂಧಾನಕಾರರೊಂದಿಗಿನ ಮಾತುಕತೆಯ ಸಮಯದಲ್ಲಿ ಮಾಡಿದ ಪ್ರಸ್ತಾಪಗಳಿಂದ ಉಕ್ರೇನ್ ಹಿಂದೆ ಸರಿದಿದೆ. ಇದರ ಪರಿಣಾಮವಾಗಿಯೇ ಮಾತುಕತೆಯಲ್ಲಿ ಬಿಕ್ಕಟ್ಟು ಉಂಟಾಗಿದೆ ಮತ್ತು ಮಾಸ್ಕೋ ತನ್ನ ಆಕ್ರಮಣವನ್ನು ಮುಂದುವರಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲದಂತಾಗಿದೆ ಎಂದು ಪುಟಿನ್ ಹೇಳಿದ್ದಾರೆ.
