ಪಾಕಿಸ್ತಾನದ ಪ್ರಧಾನಿ ಹುದ್ದೆಯಿಂದ ಇಮ್ರಾನ್ ಖಾನ್ ಪದಚ್ಯುತಿ ವಿರೋಧಿಸಿ ಅಲ್ಲಿನ ಜನ ಪಂಜಾಬ್ ಪ್ರಾಂತ್ಯದ ಲಾಲ್ ಹವೇಲಿಯಲ್ಲಿ ಸೇನೆ ವಿರುದ್ಧ ಬೃಹತ್ ಪ್ರತಿಭಟನೆಯನ್ನು ನಡೆಸಿದ್ದಾರೆ.
ಸೇನೆ ವಿರುದ್ಧ ಚೌಕಿದಾರ್ ಚೋರ್ ಹೇ ಎಂಬ ಘೋಷಣೆಗಳನ್ನು ಕೂಗುತ್ತಾ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೇನೆ ವಿರುದ್ಧ ಯಾವುದೇ ರೀತಿಯ ಘೋಷಣೆ ಕೂಗಬೇಡಿ. ನಮ್ಮದು ಶಾಂತಿಯುತ ಹೋರಾಟ ಆಗಬೇಕೆಂದು ಆಂತರಿಕ ವ್ಯವಹಾರಗಳ ಮಾಜಿ ಸಚಿವ ಶೇಖ್ ರಶೀದ್ ಮನವಿ ಮಾಡಿಕೊಂಡಿದ್ದಾರೆ.
ಈ ವಿಷಯಕ್ಕೆ ಇಮ್ರಾನ್ ಖಾನ್ ಅವರು ಟ್ವೀಟ್ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿಯಾಗಿ ಶಹಬಾಜ್ ಅವರನ್ನು ಜನ ಒಪ್ಪಿಕೊಳ್ಳುವುದಿಲ್ಲ. ನೂತನ ಸರ್ಕಾರದ ವಿರುದ್ಧ ದೇಶಾದ್ಯಂತ ಹೋರಾಟ ನಡೆಸಲಾಗುತ್ತದೆ.ವಿದೇಶಿ ಕುತಂತ್ರದ ವಿರುದ್ಧ ಇಂದಿನಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಮತ್ತೊಂದು ಹೋರಾಟ ಆರಂಭವಾಗಲಿದೆ.
ಈ ಬೆಳವಣಿಗೆಯ ವಿರುದ್ಧ ಪಿಐಟಿ ಕಾರ್ಯಕರ್ತರು ಹಾಗೂ ಜನರು ಬೀದಿಗಿಳಿದು ಪ್ರತಿಭಟಿಸಬೇಕೆಂದು ಇಮ್ರಾನ್ ಕರೆ ನೀಡಿದ್ದಾರೆ. ಇಮ್ರಾನ್ ಕರೆಯನ್ನು ಓಗೊಟ್ಟು ಜನ ರಸ್ತೆಗಿಳಿದು ಪ್ರತಿಭಟಿಸಿದ್ದಾರೆ. ನಮ್ಮ ದೇಶದ ಇತಿಹಾಸದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ರಸ್ತೆಗಿಳಿದಿರುವುದು ಹಿಂದೆಂದೂ ನಾನು ನೋಡಿಲ್ಲ ಎಂದು ಬರೆದಿದ್ದಾರೆ.