ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತಮ್ಮ ಸಚಿವ ಸಂಪುಟ ಪುನರ್ ರಚನೆ/ವಿಸ್ತರಣೆ ಮಾಡಿದ್ದಾರೆ.
ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ನಟಿ, ವೈಎಸ್ಸಾರ್ ಸಿಪಿ ನಾಯಕಿ ರೋಜಾ ಅವರು ನಗರಿ ವಿಧಾನಸಭಾ ಕ್ಷೇತ್ರದಿಂದ ಮರು ಆಯ್ಕೆಯಾದರೂ ಸಚಿವ ಸ್ಥಾನ ಸಿಕ್ಕಿರಲಿಲ್ಲ, ಆದರೆ, ನಾನು ವೈಎಸ್ಸಾರ್ ಪಕ್ಷದ ‘ಲಕ್ಕಿ ಚಾರ್ಮ್’ ಎಂದು ಹೇಳಿಕೊಳ್ಳುತ್ತಿದ್ದ ರೋಜಾ ಸೆಲ್ವಮಣಿ ಇಂದು ಸಕತ್ ಭಾವನಾತ್ಮಕವಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದಲ್ಲದೆ ಸಿಎಂ ಜಗನ್ ಅವರಿಗೆ ಮುತ್ತು ನೀಡಿ, ಧನ್ಯವಾದ ಅರ್ಪಿಸಿದ್ದಾರೆ.
ರಾಜಕೀಯ ಸುದ್ದಿ, ಬೆಳವಣಿಗೆ ಆಸಕ್ತರ ಕುತೂಹಲ ಕೆರಳಿಸಿದ್ದ ಜಗನ್ ಸಚಿವ ಸಂಪುಟ ಪುನರ್ ರಚನೆ ಇಂದು ನೆರವೇರಿದೆ. ಸಂಪುಟ ಪುನರ್ ರಚನೆಗೂ ಮುನ್ನ ಸಚಿವರೆಲ್ಲರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು ಸರಿ ಸುಮಾರು 24 ಮಂದಿ ಸಚಿವರ ರಾಜೀನಾಮೆಯನ್ನು ಅಧಿಕೃತವಾಗಿ ರಾಜ್ಯಪಾಲರಿಗೆ ಸಲ್ಲಿಸಲಾಗಿತ್ತು.
ಆಂಧ್ರದ ರಾಜ್ಯಪಾಲ ಬಿಸ್ವ ಭೂಷಣ್ ಹರಿಚಂದ್ರನ್ ಅವರು ಎಲ್ಲರ ರಾಜೀನಾಮೆಯನ್ನು ಅಂಗೀಕರಿಸಿದ್ದರು. ಇದರ ಬೆನ್ನಲ್ಲೇ ಹೊಸದಾಗಿ ಮತ್ತೊಮ್ಮೆ ಜಗನ್ ತಮ್ಮ ಸಂಪುಟ ರಚಿಸಿದ್ದಾರೆ. ಏಪ್ರಿಲ್ 11ರಂದು ಹೊಸ ಸಂಪುಟ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಶಾಸಕಿ ರೋಜಾಗೆ ಸಿಕ್ತು ಪವರ್, ಕೈಗಾರಿಕಾ ನಿಗಮಕ್ಕೆ
ಭರವಸೆ ನೀಡಿದಂತೆ ಎಲ್ಲಾ ಸಮುದಾಯ, ಹೊಸ ಜಿಲ್ಲೆ, ಹೊಸ ಮುಖಗಳಿಗೆ ಸಿಎಂ ಜಗನ್ ಆದ್ಯತೆ ನೀಡಿದ್ದಾರೆ. ಹೊಸ ಸಚಿವ ಸಂಪುಟದಲ್ಲಿ 25 ಮಂದಿಗೆ ಸ್ಥಾನ ಕಲ್ಪಿಸಲಾಗಿದೆ. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಂಡ, ಅಲ್ಪ ಸಂಖ್ಯಾತರು ಹೀಗೆ ಮೀಸಲು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಶಾಸಕರಾದವರಿಗೆ ಆದ್ಯತೆ ನೀಡಿ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.
ಮೂಲಗಳ ಪ್ರಕಾರ ಭರ್ಜರಿ ಖಾತೆಯೂ ದಕ್ಕುವ ಸಾಧ್ಯತೆಯಿದೆ.
ಸಿನಿಮಾ ಹಾಗೂ ಜನಪ್ರಿಯ ಕಾರ್ಯಕ್ರಮ ಜಬರ್ದಸ್ತ್ ಜಡ್ಜ್ ಸ್ಥಾನಕ್ಕೆ ರೋಜಾ ಬೈ ಬೈ ಹೇಳಿದ್ದಾರೆ. ಸದ್ಯ ಬಣ್ಣದ ಬದುಕು, ಶೂಟಿಂಗ್ ಮರೆತು ಜಗನ್ ಆಶಯದಂತೆ ಜನತೆಗಾಗಿ ಕಾರ್ಯ ನಿರ್ವಹಿಸುವುದಾಗಿ ರೋಜಾ ಘೋಷಿಸಿದ್ದಾರೆ.
ಕೊನೆ ಕ್ಷಣದ ತನಕ ಸಚಿವ ಸ್ಥಾನ ಸಿಗುವ ಬಗ್ಗೆ ಸಕತ್ ಟೆನ್ಶನ್ ಇತ್ತು. 2024ರಲ್ಲಿ ಅಲ್ಲ ಮುಂದಿನ 20 ವರ್ಷ ಜಗನ್ ಅವರೇ ಆಂಧ್ರದ ಸಿಎಂ ಆಗಿರಲಿದ್ದಾರೆ. ಟಿಡಿಪಿಗೆ ಕೇಡುಗಾಲ ಇನ್ನೇನು ಶುರುವಾಗಲಿದೆ ಎಂದು ಎಂದಿನಂತೆ ತಮ್ಮ ಫೈರ್ ಬ್ರ್ಯಾಂಡ್ ಧಾಟಿಯಲ್ಲಿ ರೋಜಾ ಗುಟುರು ಹಾಕಿದರು.
ಯಾವುದೇ ಖಾತೆ ಸಿಕ್ಕರೂ ಓಕೆ ಎಂದಿರುವ ರೋಜಾಗೆ ಗೃಹ ಖಾತೆ ಸಿಗುವ ಬಗ್ಗೆ ಸುದ್ದಿ ಹಬ್ಬಿದೆ. ಸಂಜೆ ವೇಳೆಗೆ ನೂತನ ಸಚಿವರುಗಳ ಖಾತೆ ಹಂಚಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.