ರಾಜ್ಯದ ಕಾರ್ಮಿಕರಿಗೆ ಹೆಚ್ಚಿನ ಅನುಕೂಲ ಆಗುವಂತೆ ಕೇಂದ್ರದ ಸಹಕಾರ ಕೋರಿರುವ ಸಚಿವ ಶಿವರಾಂ ಹೆಬ್ಬಾರ್, ಇಎಸ್‌ಐ ಆಸ್ಪತ್ರೆಗಳಲ್ಲಿ ಅಸಂಘಟಿತ ಕಾರ್ಮಿಕರಿಗೂ ವೈದ್ಯಕೀಯ ಸೌಲಭ್ಯ, ಜಿಲ್ಲೆಗೊಂದು ಇಎಸ್ಐ ಆಸ್ಪತ್ರೆ ತೆರೆಯಲು ಅನುಮತಿ, ಕಾರ್ಮಿಕ ಕಲ್ಯಾಣ ಮಂಡಳಿಗೆ ಸೆಸ್ ರಿಯಾಯಿತಿ ಸೇರಿದಂತೆ ಹಲವು ಅಂಶಗಳ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಿದರು.
ಇದಕ್ಕೆ ಕೇಂದ್ರದ ಸಚಿವರುಗಳಿಂದ ಸಕಾರಾತ್ಮಕ ಸ್ಪಂದನೆ ಕೂಡ ಸಿಕ್ಕಿದೆ ಎಂದು ತಿಳಿದುಬಂದಿದೆ.
ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಸಿಂಗ್ ಯಾದವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಸಂದರ್ಭ ರಾಜ್ಯ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಇಎಸ್‌ಐ ಆಸ್ಪತ್ರೆಗಳಲ್ಲಿ ಅಸಂಘಟಿತ ಕಾರ್ಮಿಕರಿಗೂ ವೈದ್ಯಕೀಯ ಸೌಲಭ್ಯ ದೊರಕುವಂತೆ ಕ್ರಮ ವಹಿಸಬೇಕು.
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಸೆಸ್ ಸಂಗ್ರಹದ ಮೂಲಕ ಆರ್ಥಿಕ ಸಂಪನ್ಮೂಲ ಹೊಂದಿದ್ದು, ಈಗಾಗಲೇ ಇತರ ಮಂಡಳಿಗಳಾದ ಕಾಫಿ ಮಂಡಳಿ, ತಂಬಾಕು ಮಂಡಳಿಗೆ ನೀಡಿರುವಂತೆ ಕಾರ್ಮಿಕ ಕಲ್ಯಾಣ ಮಂಡಳಿಗೂ ಸೆಸ್ ಮೇಲಿನ ತೆರಿಗೆಯಿಂದ ರಿಯಾಯಿತಿ ನೀಡುವಂತೆ ಮನವಿ ಮಾಡಿದರು.
ಅಲ್ಲದೆ, ಐಎಸ್‌ಐ ಆಸ್ಪತ್ರೆಗಳಲ್ಲಿ “ಆಯುಷ್’ ವಿಭಾಗಗಳನ್ನು ತೆರೆಯಬೇಕು. ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಒಂದರಂತೆ ಇಎಸ್‌ಐ ಆಸ್ಪತ್ರೆಗಳನ್ನು ತೆರೆಯುವಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
19 ಚಿಕಿತ್ಸಾಲಯಕ್ಕೆ ಅಸ್ತು
ರಾಜ್ಯ ಕಾರ್ಮಿಕ ಇಲಾಖೆಯು ರಾಜ್ಯದ ವಿವಿಧೆಡೆ 69 ಚಿಕಿತ್ಸಾಲಯಗಳನ್ನು ತೆರೆಯಲು ಅನುಮತಿ ಕೋರಲಾಗಿದ್ದು, ಈ ಸಂಬಂಧ ಕೇಂದ್ರವು ಇದೀಗ 19ಕ್ಕೆ ಅನುಮತಿ ನೀಡಿದ್ದು, ಇನ್ನುಳಿದ 50 ಚಿಕಿತ್ಸಾಲಯಗಳನ್ನು ತೆರೆಯಲು ಅನುಮತಿ ನೀಡುವಂತೆ ಮತ್ತು ಪ್ರತೀ ಜಿಲ್ಲೆಗೆ ಒಂದರಂತೆ ಇಎಸ್‌ಐ ಆಸ್ಪತ್ರೆಗಳನ್ನು ಆರಂಭಿಸಲು ಅನುಮೋದನೆ ನೀಡಬೇಕು ಎಂದು ಕೋರಿದರು.
ಜಿಲ್ಲೆಗಳಲ್ಲಿ ಇರುವ ಚಿಕಿತ್ಸಾಲಯಗಳನ್ನು “ಆರೋಗ್ಯ ಕಲ್ಯಾಣ ಕೇಂದ್ರ’ಗಳಾಗಿ ಪರಿವರ್ತಿಸಬೇಕು. ಈ ಕಲ್ಯಾಣ ಕೇಂದ್ರಗಳಲ್ಲಿ ಇಸಿಜಿ, ಮೈನರ್ ಒಟಿ, ಆಕ್ಸಿಜನ್ ಸೇವೆಗಳ ಜತೆಗೆ ಅಗತ್ಯ ವೈದ್ಯ ಸಿಬಂದಿ ಒದಗಿಸಬೇಕು ಎಂದರು.