ಶ್ರೀರಾಮನವಮಿಯಂದು ಶ್ರೀರಾಮಚಂದ್ರನು
ಭೂಮಿಯಲ್ಲಿ ಅವತಾರ ಮಾಡಿದ ದಿನ.
ಶ್ರೀವಿಷ್ಣುವಿನ ದಶಾವತಾರದಲ್ಲಿ ಏಳನೇ ಅವತಾರವೇಶ್ರೀರಾಮಾವತಾರ.ಶ್ರೀರಾಮಚಂದ್ರನು
ಮಹಾವಿಷ್ಣುವಿನ ಅವತಾರವಾದರೂ ತನ್ನ ಆದರ್ಶ
ನಡೆಯಿಂದ ಭೂಮಿಯಲ್ಲಿಮಹಾಪುರುಷನಾದನು.
ಶ್ರೀರಾಮನುಒಬ್ಬಆದರ್ಶಪುತ್ರ,ಆದರ್ಶಮಿತ್ರ,
ಆದರ್ಶ ಬಂಧು,ಪ್ರಜೆಗಳ ಅಭ್ಯುದಯವನ್ನು ಬಯಸಿದ ಆದರ್ಶರಾಜ.
ಇಡೀ ಮನುಷ್ಯ ಕುಲಕ್ಕೆ ಆದರ್ಶ ಪುರುಷ ಶ್ರೀರಾಮಚಂದ್ರ.ಅವನ ಜೀವನ ಮಾರ್ಗ ನಡೆದ ಹಾದಿ,ಆತನ ಗುಣ ಇಂದಿಗೂ ಆದರ್ಶನೀಯ.
ಭಗವಂತನಾದರೂ ಸ್ವತಃ ಮನುಷ್ಯನಾಗಿ ಭೂಮಿಯಲ್ಲಿ ಜನ್ಮ ತಾಳಿ ಪ್ರತಿಯೊಬ್ಬರಿಗೂ ಜೀವನದ ಅತ್ಯುನ್ನತ ಮಾರ್ಗವನ್ನು ತೋರಿಸಿದ
ಮಹಾ ಪುರುಷ ಶ್ರೀರಾಮ.
ಅಯೋಧ್ಯೆಯ ರಾಜನಾಗಿದ್ದ ದಶರಥನು ತನ್ನ
ಹಿರಿಯ ಮಗನಾಗಿದ್ದ ರಾಮನಿಗೆ ರಾಜ್ಯಾಭಿಷೇಕವನ್ನು ಮಾಡಬೇಕೆಂದು ಅರಮನೆಯೆಲ್ಲಾ ಸಂತೋಷದಿಂದ ಮುಳುಗಿದ್ದಾಗ ಹಠಾತ್ತಾಗಿ ರಾಮನಿಗೆ ಪಟ್ಟಾಭಿಷೇಕದ ಬದಲು ವನವಾಸಕ್ಕೆ ಹೋಗಬೇಕಾದ ಪರಿಸ್ಥಿತಿ ಎದುರಾಗುತ್ತದೆ.ಇದನ್ನು ರಾಮನು ಬಹಳಸಮಚಿತ್ತದಿಂದ ಸಂತೋಷದಿಂದ
ಸ್ವೀಕರಿಸುತ್ತಾನೆ.ರಾಮನು ವನವಾಸಕ್ಕೆ ಹೋಗಲು
ಕಾರಣಳಾದವಳು ದಶರಥನ ರಾಣಿ ಕೈಕೇಯಿ.
ಕೈಕೇಯಿ ತನ್ನನ್ನು ವನವಾಸಕ್ಕೆ ಕಳಿಸುವಂತೆ ಮಾಡಿದರೂ ರಾಮನಿಗೆ ಅವಳ ಮೇಲಿನ ಪ್ರೀತಿ ಕಿಂಚಿತ್ತೂ ಬದಲಾಗುವುದಿಲ್ಲ.
ಇತ್ತ ರಾಮನು ವನವಾಸಕ್ಕೆ ಹೋದಮೇಲೆ,ಹಿರಿಯ
ಮಗನ ಅಗಲುವಿಕೆಯನ್ನು ಸಹಿಸಿಕೊಳ್ಳಲಾಗದೇ
ದಶರಥ ರಾಜನು ಮರಣ ಹೊಂದುತ್ತಾನೆ.
ಭರತ,ಶತೃಘ್ನರು ತಂದೆಯ ದಿನ ಕರ್ಮಾದಿ ಕಾರ್ಯಕ್ರಮಗಳು ಮುಗಿದ ಮೇಲೆ,ರಾಮನನ್ನು
ಒಲಿಸಿ ಅಯೋಧ್ಯೆಯ ರಾಜ್ಯಾಭಿಷೇಕಕ್ಕೆ ಕರೆದುಕೊಂಡು ಬರುವ ಧೃಡ ನಿರ್ಧಾರಮಾಡಿ
ಅವರಿದ್ದ ಚಿತ್ರಕೂಟದ ಬಿಡಾರಕ್ಕೆ ಬರುತ್ತಾರೆ.ಇವರು ಬರುತ್ತಿರುವುದನ್ನು ದೂರದಿಂದ ನೋಡಿದ ಲಕ್ಷ್ಮಣನು ಭರತನು ರಾಮನನ್ನು
ಹೆದರಿಸಲು ಬರುತ್ತಿರ ಬಹುದೆಂದು ಊಹಿಸಿ
ರಾಮನ ಹತ್ತಿರ ಹೇಳುತ್ತಾನೆ.ರಾಮನು ತಾವು
ವನವಾಸಕ್ಕೆ ಬರುವಾಗ ಭರತ ಶತೃಘ್ನರು ಅಯೋಧ್ಯೆಯಲ್ಲಿ ಇಲ್ಲದಿದ್ದುದರಿಂದ ತಮ್ಮನ್ನು
ಮಾತನಾಡಿಸಲಿಕ್ಕೆ ಬರುತ್ತಿದ್ದಾರೆ ,ಇದರಲ್ಲಿ ಬೇರೆ
ಏನನ್ನೂ ಯೋಚಿಸುವುದು ಬೇಡ ಎಂದು ಲಕ್ಷ್ಮಣನಿಗೆ ಸಮಾಧಾನ ಮಾಡುತ್ತಾನೆ.ಹೀಗೆ ತನ್ನ ತಮ್ಮಂದಿರಲ್ಲಿ ಸಹೋದರ ವಾತ್ಸಲ್ಯವನ್ನು ಯಾವಾಗಲೂ ಹೊಂದಿದ್ದವನು ಶ್ರೀರಾಮ.
ಹನುಮಂತನಿಂದ ಪರಿಚಯವಾದ ಸುಗ್ರೀವನಿಗೆ
ತನ್ನ ಅಣ್ಣನಾದ ವಾಲಿಯನ್ನು ಸಂಹಾರ ಮಾಡಿ
ಕಿಷ್ಂಧೆಯ ರಾಜನನ್ನಾಗಿ ಮಾಡುತ್ತಾನೆ.ಹೀಗೆ
ಸ್ನೇಹಬಯಸಿ ಬಂದು ಸಹಾಯ ಅಪೇಕ್ಷಿಸಿದವರಿಗೆ
ಸಹಾಯ ಹಸ್ತ ಚಾಚಿದವನು ಶ್ರೀರಾಮ.
ರಾವಣನ ತಮ್ಮ ವಿಭೀಷಣನು ಇವನ ಆಶ್ರಯ
ಬಯಸಿ ಬಂದು ಮೊರೆಹೋದಾಗ ,ಶತೃಪಕ್ಷದಿಂದ
ಬಂದವನು ಎಂದು ನೋಡದೆ ಇವನೂ ತನ್ನ ನಿಜವಾದ ಭಕ್ತನೆಂದು ತಿಳಿದು ಅವನಿಗೆ ಆಶ್ರಯ
ಕೊಟ್ಟವನು ಸ್ನೇಹಮಯಿ ಶ್ರೀರಾಮ.ಹೀಗೆ ಶ್ರೀರಾಮನ ಆದರ್ಶನಡೆಗಳನ್ನು ರಾಮಾಯಣದಲ್ಲಿ ನಾವು ಕಾಣುತ್ತೇವೆ.
ಶ್ರೀರಾಮನವಮಿಯಂದು ನಾವು ಶ್ರೀರಾಮನ ಆದರ್ಶಗಳನ್ನು ಅಳವಡಿಸಿಕೊಳ್ಳಲು ಸಂಕಲ್ಪಿಸಿ
ಜೀವನದಲ್ಲಿ ಪಾಲಿಸಿದರೆ ರಾಮನವಮಿ ಆಚರಣೆ
ಅರ್ಥಪೂರ್ಣವಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.