ಯಾವುದೇ ಸೂಪರ್ ಪವರ್ ಕೂಡಾ ಭಾರತಕ್ಕೆ ಷರತ್ತುಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅವಿಶ್ವಾಸ ನಿರ್ಣಯದ ಮೇಲೆ ಮತ ಚಲಾಯಿಸುವ ಮೊದಲು ತಮ್ಮ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್, ಜನರ ಹಿತಾಸಕ್ತಿಗಳನ್ನು ಉಲ್ಲೇಖಿಸಿ ರಷ್ಯ, ಉಕ್ರೇನ್ ಯುದ್ಧದಲ್ಲಿ ಯಾವುದೇ ಪಕ್ಷವನ್ನು ತೆಗೆದುಕೊಳ್ಳಲು ನಿರಾಕರಿಸಿದಾಗ ಯಾವುದೇ ದೇಶವು ಭಾರತದ ವಿರುದ್ಧ ನಿಲ್ಲಲು ಸಾಧ್ಯವಿಲ್ಲ.
ಯುರೋಪಿಯನ್ ಯೂನಿಯನ್ ರಾಜತಾಂತ್ರಿಕರು ಪಾಕಿಸ್ತಾನ ರಷ್ಯಾದ ವಿರುದ್ಧ ಮಾತನಾಡಬೇಕು ಎಂದು ಒತ್ತಡ ಹೇರುತ್ತಲೇ ಇದ್ದರು. ಆದರೆ ಭಾರತ ಸಾರ್ವಭೌಮ ರಾಷ್ಟ್ರವಾಗಿರುವುದರಿಂದ ಭಾರತಕ್ಕೆ ಅದನ್ನು ಹೇಳುವ ಧೈರ್ಯ ಅವರಿಗೆ ಸಾಧ್ಯವಾಗಲಿಲ್ಲ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ನಾನು ಬೇರೆ ದೇಶಕ್ಕಾಗಿ ಜನರನ್ನು ಸಾಯಲು ಬಿಡಲಾರೆ. ನಮ್ಮ ವಿದೇಶಾಂಗ ನೀತಿ ಸಾರ್ವಭೌಮವಾಗಿರಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.
ನನ್ನ ರಷ್ಯಾ ಭೇಟಿಯಿಂದ ಯುಎಸ್ ಅತೃಪ್ತಿ ಹೊಂದಿತ್ತು. ಮಿತ್ರ ರಾಷ್ಟ್ರವಾಗಿದ್ದರೂ ಪಾಶ್ಚಿಮಾತ್ಯ ದೇಶವು ಪಾಕಿಸ್ತಾನದಲ್ಲಿ 400 ಡ್ರೋನ್ ದಾಳಿಗಳನ್ನು ನಡೆಸಿತ್ತು. ಪ್ರತಿಪಕ್ಷಗಳೊಂದಿಗೆ ಶಾಮೀಲಾಗಿ ತನ್ನ ಸರ್ಕಾರವನ್ನು ಉರುಳಿಸಲು ಸಕ್ರಿಯವಾಗಿ ಸಂಚು ರೂಪಿಸಿದೆ ಎಂದು ಇಮ್ರಾನ್ ಖಾನ್ ಕಿಡಿಕಾರಿದ್ದಾರೆ.
ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಿದರೆ ಮಾತ್ರ ಯುಎಸ್ ಪಾಕಿಸ್ತಾನವನ್ನು ಕ್ಷಮಿಸುತ್ತದೆ ಎಂದು ಅಮೆರಿಕದ ಪ್ರತಿನಿಧಿಯೊಬ್ಬರು ಹೇಳಿದ್ದಾರೆ ಎಂದು ಇಮ್ರಾನ್ ಖಾನ್ ತಮ್ಮ ಆರೋಪವನ್ನು ಮುಂದುವರೆಸಿದರು. ಕೆಲವು ವಿಚಾರಗಳನ್ನು ಸಾರ್ವಜನಿಕರಿಗೆ ಮತ್ತು ಮಾಧ್ಯಮಗಳಿಗೆ ಬಹಿರಂಗಪಡಿಸಲು ಸಾಧ್ಯವಿಲ್ಲ. ಯಾಕೆಂದರೆ ಅವುಗಳು ಉನ್ನತ ರಹಸ್ಯವಾಗಿದ್ದು, ಒಂದು ವೇಳೆ ಸೋರಿಕೆಯಾದಲ್ಲಿ, ಪಾಕಿಸ್ತಾನದ ಭದ್ರತೆಗೆ ಸಂಕಷ್ಟವಾಗುತ್ತದೆ ಎಂದು ಇಮ್ರಾನ್ ತಿಳಿಸಿದ್ದಾರೆ.
ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸುವ ರಾಷ್ಟ್ರೀಯ ಅಸೆಂಬ್ಲಿ ಡೆಪ್ಯೂಟಿ ಸ್ಪೀಕರ್ ಅವರ ವಿವಾದಾತ್ಮಕ ನಿರ್ಧಾರದ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪಿನ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸುತ್ತಾ, ಪಾಕಿಸ್ತಾನದಲ್ಲಿ ಆಮದು ಮಾಡಿಕೊಂಡ ಸರ್ಕಾರ” ವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಕನಿಷ್ಠ ವಿದೇಶಿ ಪಿತೂರಿಯ ಪುರಾವೆಗಳನ್ನು ನೋಡಬೇಕು ಮತ್ತು ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ಇಮ್ರಾನ್ ಖಾನ್ ತಿಳಿಸಿದ್ದಾರೆ.