ಕೊರೊನಾ ಕಾರಣಕ್ಕೆ ಸ್ಥಗಿತವಾಗಿದ್ದ ಶಿವಮೊಗ್ಗ-ರೇಣಿಗುಂಟ (ತಿರುಪತಿ) ಹಾಗೂ ಶಿವಮೊಗ್ಗ-ಬೆಂಗಳೂರು-ಮದ್ರಾಸ್ ಎಕ್ಸ್‌ಪ್ರೆಸ್ ರೈಲು ಸಂಚಾರ ಏ.17ರಿಂದ ಪುನರಾರಂಭಗೊಳ್ಳಲಿದೆ.
ಶಿವಮೊಗ್ಗದಿಂದ ಭಾನುವಾರ ಹಾಗೂ ಮಂಗಳವಾರ ಮತ್ತು ಮದರಾಸ್‌ನಿಂದ ಸೋಮವಾರ ಮತ್ತು ಬುಧವಾರ ಈ ರೈಲು ಸಂಚರಿಸಲಿದೆ.
ವಾರಕ್ಕೆ ಎರಡು ದಿನ ಸಂಚರಿಸುವ ಈ ರೈಲು ಸೇವೆಯು ಶಿವಮೊಗ್ಗದಿಂದ ಸಂಜೆ 7ಕ್ಕೆ ಹೊರಟು ಮರುದಿನ ಬೆಳಿಗ್ಗೆ 8.20ಕ್ಕೆ ರೇಣಿಗುಂಟವನ್ನು ಹಾಗೂ 11.10ಕ್ಕೆ ಮದ್ರಾಸ್ ತಲುಪುತ್ತದೆ. ಅದೇ ದಿನ ಮದ್ರಾಸ್‌ನಿಂದ ಸಂಜೆ 3.50ಕ್ಕೆ ಹೊರಡುವ ಈ ರೈಲು ರೇಣಿಗುಂಟಕ್ಕೆ ಸಂಜೆ 6.10ಕ್ಕೆ ತಲುಪಿ ಮರುದಿನ ಬೆಳಿಗ್ಗೆ 7.55ಕ್ಕೆ ಶಿವಮೊಗ್ಗವನ್ನು ತಲುಪಲಿದೆ.
ಮಲೆನಾಡು, ಕರಾವಳಿ ಮತ್ತು ಶಿವಮೊಗ್ಗ ಭಾಗದ ಜನರು ರೇಣಿಗುಂಟಕ್ಕೆ ಮುಂಜಾನೆ ತಲುಪಿ ಸಂಜೆಯ ವೇಳೆಗೆ ತಿರುಪತಿಯಲ್ಲಿ ದೇವರ ದರ್ಶನ ಪಡೆದು ಅದೇ ದಿನ ರಾತ್ರಿ ಶಿವಮೊಗ್ಗ ಮರುಪ್ರಯಾಣ ಆರಂಭಿಸಲು ಈ ಬದಲಾದ ಸಮಯ ನೆರವಾಗಲಿದೆ. ಈ ಮೊದಲಿನ ರೈಲು ಸೇವೆಯು ಶಿವಮೊಗ್ಗದಿಂದ ಮುಂಜಾನೆ ತನ್ನ ಪ್ರಯಾಣವನ್ನು ಆರಂಭಿಸುತ್ತಿರುವುದರಿಂದ ಶಿವಮೊಗ್ಗದಿಂದ ತಿರುಪತಿಗೆ ತೆರಳಲು ಬಯಸುತ್ತಿದ್ದ ಪ್ರಯಾಣಿಕರು ಇಡೀ ದಿನವನ್ನು ರೈಲಿನಲ್ಲಿ ಕಳೆಯಬೇಕಾಗಿತ್ತು.
ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಯತ್ನದ ಫಲವಾಗಿ ಶಿವಮೊಗ್ಗ-ರೇಣಿಗುಂಟ(ತಿರುಪತಿ) ಹಾಗೂ ಶಿವಮೊಗ್ಗ-ಬೆಂಗಳೂರು-ಮದ್ರಾಸ್ ಎಕ್ಸ್‌ಪ್ರೆಸ್ ವಾರಕ್ಕೆ ಎರಡು ಭಾರಿ ಸಂಚರಿಸುವ ರೈಲು ಸೇವೆಗಳನ್ನು ಆರಂಭಿಸಲಾಗಿತ್ತು.