ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ 38ನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್ ಅನ್ನು ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (ನ್ಯಾಟೋ)ಗೆ ಸೇರಲು ಬಿಡದಿರುವುದು ತಪ್ಪು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.
ನ್ಯಾಟೋ ಬಗ್ಗೆ ಮಾತನಾಡಲು ನಮಗೆ ಕಷ್ಟ, ಏಕೆಂದರೆ ನ್ಯಾಟೋ ನಮ್ಮನ್ನು ಒಪ್ಪಿಕೊಳ್ಳಲು ಬಯಸುವುದಿಲ್ಲ. ಇದು ತಪ್ಪು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನಾವು ನ್ಯಾಟೋಗೆ ಸೇರಿದರೆ, ನಾವು ನ್ಯಾಟೋವನ್ನು ಹೆಚ್ಚು ಬಲಪಡಿಸುತ್ತೇವೆ, ಎಂದು ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದರು.
ನಮ್ಮದು ದುರ್ಬಲ ರಾಜ್ಯವಲ್ಲ. ನಾವು ನ್ಯಾಟೋ ಖರ್ಚಿನಲ್ಲಿ ಬಲಪಡಿಸಿಕೊಳ್ಳುವುದಕ್ಕೆ ಪ್ರಸ್ತಾಪ ಮಾಡುತ್ತಿಲ್ಲ. ಬದಲಿಗೆ ಅದನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಿದ್ದೇವೆ. ನಮ್ಮ ಪ್ರಕಾರ, ನಾವು ಯುರೋಪಿಯನ್ ಖಂಡದಲ್ಲಿ ಪ್ರಮುಖ ಪಾತ್ರ ವಹಿಸುತ್ತೇವೆ, ಎಂದಿದ್ದಾರೆ.
ಪಾಶ್ಚಿಮಾತ್ಯ ರಾಷ್ಟ್ರಗಳ ಪೈಕಿ ನ್ಯಾಟೋ ಸದಸ್ಯತ್ವ ಪಡೆದುಕೊಳ್ಳುವ ಉಕ್ರೇನ್ ನಿರ್ಧಾರವನ್ನು ರಷ್ಯಾ ವಿರೋಧಿಸಿತ್ತು. ಕಳೆದ ಫೆಬ್ರವರಿ 24ರಂದು ಯುದ್ಧ ಘೋಷಣೆ ಮಾಡುವುದಕ್ಕೂ ಪೂರ್ವದಲ್ಲಿ ತನ್ನ ದಾಳಿಗೆ ಉಕ್ರೇನ್ ತೆಗೆದುಕೊಂಡ ಅದೊಂದು ನಿರ್ಧಾರವೇ ಕಾರಣ ಎಂದು ದೂಷಿಸಿತ್ತು.
ಸೋವಿಯತ್ ಒಕ್ಕೂಟದಿಂದ ಯುರೋಪ್ ಅನ್ನು ರಕ್ಷಿಸಲು ಶೀತಲ ಸಮರದ ಪ್ರಾರಂಭದಲ್ಲಿ ರಚಿಸಲಾದ ಅಟ್ಲಾಂಟಿಕ್ ಒಕ್ಕೂಟವಾದ ನ್ಯಾಟೋಗೆ ಉಕ್ರೇನ್ ಸೇರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ರಷ್ಯಾ ಪದೇ ಪದೇ ಹೇಳಿದೆ.
ಆದರೆ ರಷ್ಯಾದೊಂದಿಗೆ ಒಂದು ತಿಂಗಳ ಯುದ್ಧದ ನಂತರ, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಕದನ ವಿರಾಮಕ್ಕೆ ಬದಲಾಗಿ ನ್ಯಾಟೋ ಸದಸ್ಯತ್ವವನ್ನು ಪಡೆಯದಿರಲು ಸಿದ್ಧವಾಗಿರುವಂತೆ ಹೇಳಿದರು.
ಅದಕ್ಕೆ ಪ್ರತಿಯಾಗಿ ರಷ್ಯಾ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳುವುದು ಮತ್ತು ಉಕ್ರೇನ್‌ನ ಭದ್ರತೆಗೆ ಸಂಬಂಧಿಸಿದಂತೆ ಭರವಸೆ ನೀಡಿತ್ತು.
ಭವಿಷ್ಯದಲ್ಲಿ ರಷ್ಯಾ ಮತ್ತೆ ಆಕ್ರಮಣ ಮಾಡುವ ಸಾಧ್ಯತೆಯನ್ನು ತೊಡೆದು ಹಾಕಲು ಹಾಗೂ ಉಕ್ರೇನ್‌ಗೆ ದೀರ್ಘಾವಧಿಯ ಬೆಂಬಲ ನೀಡುವುದಕ್ಕೆ ಸಂಬಂಧಿಸಿದಂತೆ ಯುಎಸ್ ಸಿದ್ಧವಾಗಿದೆ. ಆದರೆ ಅದಕ್ಕೆ ಸಂಬಂಧಿಸಿದಂತೆ ಯುನೈಟೆಡ್ ಸ್ಟೇಟ್ಸ್ ಜೊತೆ ಒಪ್ಪಂದ ಮಾಡಿಕೊಳ್ಳುವುದಕ್ಕೆ ಅಧ್ಯಕ್ಷ ಜೋ ಬೈಡನ್ ಅವರಿಗೆ ತಿಳಿಸಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಳೆದ ಫೆಬ್ರವರಿ 24ರಂದು ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದರು. ಉಕ್ರೇನ್‌ನ “ಸೈನ್ಯೀಕರಣ” ಮತ್ತು “ಡೆನಾಜಿಫಿಕೇಶನ್” ಗುರಿಯನ್ನು ಹೊಂದಿರುವ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಕಳೆದ ಒಂದು ತಿಂಗಳ ಯುದ್ಧದ ಅವಧಿಯಲ್ಲಿ, ರಷ್ಯಾವು ಉಕ್ರೇನ್ ವಿರುದ್ಧ ಪುನರಾವರ್ತಿತ ದಾಳಿಗಳನ್ನು ಪ್ರಾರಂಭಿಸಿದೆ. ಅದರ ನಗರಗಳನ್ನು ಧ್ವಂಸಗೊಳಿಸಿದೆ, ಸಾವಿರಾರು ಜನರನ್ನು ಕೊಂದಿದ್ದು, ಲಕ್ಷಾಂತರ ಉಕ್ರೇನಿಯನ್ನರನ್ನು ಸ್ಥಳಾಂತರಿಸಿದೆ.