12ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವನಿತೆಯರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
71 ರನ್ಗಳ ಅಮೋಘ ಗೆಲುವು ಸಾಧಿಸಿ ದಾಖಲೆಯ ಏಳನೇ ಬಾರಿ ಐಸಿಸಿ ಮಹಿಳಾ ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ.
ನ್ಯೂಜಿಲೆಂಡ್ನಲ್ಲಿ ನಡೆದ 12ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವನಿತೆಯರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಕ್ರಿಸ್ಟ್ಚರ್ಚ್ನ ಹೇಗ್ಲೆ ಓವಲ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ 71 ರನ್ಗಳ ಅಮೋಘ ಗೆಲುವು ಸಾಧಿಸಿದೆ.
ಈ ಮೂಲಕ ದಾಖಲೆಯ ಏಳನೇ ಬಾರಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಮಹಿಳಾ ತಂಡ 50 ಓವರ್ಗೆ ಬರೋಬ್ಬರಿ 356 ರನ್ ಸಿಡಿಸಿತು. ವಿಕೆಟ್ ಕೀಪರ್ ಬ್ಯಾಟರ್ ಅಲಿಸಾ ಹೀಲಿ ( ಅವರ ದಾಖಲೆ 170 ರನ್ ಮತ್ತು, ರಚೆಲ್ ಹೇನ್ಸ್ ಮತ್ತು ಬೆತ್ ಮೂನೆ ಅವರ ಅರ್ಧಶತಕದ ನೆರವಿನಿಂದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಇಂಗ್ಲೆಂಡ್ಗೆ ಕಠಿಣ ಟಾರ್ಗೆಟ್ ನೀಡಿತ್ತು.
ಆದರೆ, ಆಂಗ್ಲರು 285 ರನ್ಗೆ ಆಲೌಟ್ ಆಗುವ ಮೂಲಕ ರನ್ನರ್ ಅಪ್ಗೆ ತೃಪ್ತಿ ಪಟ್ಟಿತು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಆಸ್ಟ್ರೇಲಿಯಾ ಮಹಿಳಾ ತಂಡ ಬೊಂಬಾಟ್ ಆರಂಭ ಪಡೆದುಕೊಂಡಿತು. ಓಪನರ್ಗಳಾದ ಅಲಿಸಾ ಹೀಲಿ ಹಾಗೂ ರಚೆಲ್ ಹೇನ್ಸ್ ಭರ್ಜರಿ ರನ್ ಕಲೆಹಾಕಿದರು. ಇಂಗ್ಲೆಂಡ್ ಬೌಲರ್ಗಳನ್ನು ಎಚ್ಚರಿಕೆಯಿಂದ ಎದುರಿಸಿದ ಈ ಜೋಡಿ ಮೊದಲ ವಿಕೆಟ್ಗೆ 160 ರನ್ಗಳ ಜೊತೆಯಾಟ ಆಡಿದರು.
ರಚೆಲ್ ಹೇನ್ಸ್ 93 ಎಸೆತಗಳಲ್ಲಿ 68 ರನ್ ಗಳಿಸಿ ಔಟಾದರು. ನಂತರ ಹೀಲಿ ಜೊತೆಯಾದ ಬೆತ್ ಮೂನೆ ಮತ್ತೊಂದು ಅಮೋಘ ಇನ್ನಿಂಗ್ಸ್ ಕಟ್ಟಿದರು. ಅದರಲ್ಲೂ ಅಲಿಸಾ ಸ್ಫೋಟಕ ಆಟವಾಡಿದರು.
ಎದುರಾಳಿ ಬೌಲರ್ಗಳ ಬೆಂಡೆತ್ತಿದ್ದ ಅಲಿಸಾ ಮೈದಾನದ ಮೂಲೆ ಮೂಲೆಗೆ ಬೌಂಡರಿ ಮೂಲಕ ಚೆಂಡನ್ನು ಅಟ್ಟಿ ಬೆವರಿಳಿಸಿದರು.
ವಿಶ್ವಕಪ್ ಇತಿಹಾಸದಲ್ಲೇ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ತೋರಿದ ಅಲಿಸಾ ಕೇವಲ 138 ಎಸೆತಗಳಲ್ಲಿ 26 ಬೌಂಡರಿಯೊಂದಿಗೆ 170 ರನ್ ಚಚ್ಚಿದರು. ಕೊನೇ ಹಂತದಲ್ಲಿ ಮೂನೇ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸಿದರು.
ಕೇವಲ 47 ಎಸೆತಗಳಲ್ಲಿ 62 ರನ್ ಸಿಡಿಸಿ ಔಟಾದರು. ಆಸ್ಟ್ರೇಲಿಯಾ ಮಹಿಳಾ ತಂಡ ಅಂತಿಮವಾಗಿ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿತು. ಇಂಗ್ಲೆಂಡ್ ಪರ ಆಯನಿ ಶ್ರುಬ್ಸೊಲೆ 3 ವಿಕೆಟ್ ಪಡೆದರು.
ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ 100 ರನ್ಗೂ ಮೊದಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಓಪನರ್ಗಳಾದ ಟಾಮಿ ಬ್ಯೂಮೊಂಟ್ (27) ಹಾಗೂ ಡೆನಿಯಲ್ ವ್ಯಾಟ್ 4 ರನ್ಗೆ ನಿರ್ಗಮಿಸಿದರು. ನಾಯಕಿ ಹೆದರ್ ನೈಟ್ ಕೂಡ 26 ರನ್ಗೆ ಬ್ಯಾಟ್ ಕೆಳಗಿಟ್ಟಿದ್ದು ತಂಡ ಸೋಲಿನ ಸುಳಿಗೆ ಸಿಲುಕಿತು. ನಂತರ ಬಂದ ಬ್ಯಾಟರ್ಗಳ ಪೈಕಿ ನಥಾಲಿ ಕೀವರ್ ಬಿಟ್ಟು ಉಳಿದವರು ಯಾರೂ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ಆಯಮಿ ಜೋನ್ಸ್ 20 ಮತ್ತು ಸೋಫಿಯ ಡಂಕ್ಲೆ 23 ರನ್ಗೆ ಸುಸ್ತಾದರು. ಆದರೆ, ನಥಾಲಿ ಕೀವರ್ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದರು.
ಆಸ್ಟ್ರೇಲಿಯಾ ಪರ ಅಲನ್ ಕಿಂಗ್ ಹಾಗೂ ಜೆಸ್ ಜಾನ್ಸೆನ್ ತಲಾ 3 ವಿಕೆಟ್ ಕಿತ್ತರೆ ಮೆಗನ್ ಸ್ಕಟ್ 2 ವಿಕೆಟ್ ಪಡೆದರು.
71 ರನ್ಗಳ ಗೆಲುವಿವೊಂದಿಗೆ ಆಸ್ಟ್ರೇಲಿಯಾ ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಏಳನೆ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ವಿಶ್ವಕಪ್ನಲ್ಲಿ ಚಾಂಪಿಯನ್ ಆಗುವ ತಂಡ ಕಳೆದ ಬಾರಿಗಿಂತ ದುಪ್ಪಟ್ಟು ಎಂದರೆ 1.32 ಮಿಲಿಯನ್ ಅಮೆರಿಕನ್ ಡಾಲರ್(ಸುಮಾರು 9.94 ಕೋಟಿ ರು.) ಬಹುಮಾನ ಪಡೆದುಕೊಂಡಿದೆ.
ರನ್ನರ್ ಅಪ್ ಆದ ಇಂಗ್ಲೆಂಡ್ ತಂಡ 4.51 ಕೋಟಿ ರು. ಬಹುಮಾನ ಸ್ವೀಕರಿಸಿದೆ.