ಬಿಮ್‌ಸ್ಟೆಕ್ ರಾಷ್ಟ್ರಗಳ ನಡುವೆ ಹೆಚ್ಚಿನ ರೀತಿಯ ಸಹಕಾರ ಮತ್ತು ಪ್ರಾದೇಶಿಕ ಭದ್ರತೆ ವಿಚಾರದಲ್ಲಿ ಇನ್ನಷ್ಟು ಮಾಹಿತಿ ವಿನಿಮಯ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ವರ್ಚ್ಯು ಯಲ್ ಆಗಿ ನಡೆದ ಬಿಮ್‌ಸ್ಟೆಕ್ ರಾಷ್ಟ್ರಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸದ್ಯ ನಡೆಯುತ್ತಿರುವ ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷವನ್ನು ಪರೋಕ್ಷವಾಗಿ ಉಲ್ಲೇಖಿಸಿ ಈ ಮಾತುಗಳನ್ನಾಡಿದ್ದಾರೆ.
ಬಂಗಾಳ ಕೊಲ್ಲಿ ಬಹುಕ್ಷೇತ್ರೀಯ ಮತ್ತು ಆರ್ಥಿಕ ಸಹಕಾರ ಒಕ್ಕೂಟ- ಬಿಮ್‌ಸ್ಟೆಕ್ ರಾಷ್ಟ್ರಗಳು ಆರೋಗ್ಯ, ಆರ್ಥಿಕ ಭದ್ರತೆ ವಿಚಾರದಲ್ಲಿ ಪರಸ್ಪರ ಸಹಕಾರ ನೀಡುವುದು ಆದ್ಯತೆಯ ವಿಚಾರವಾಗಿದೆ ಎಂದರು. ಜತೆಗೆ ಬಂಗಾಳ ಕೊಲ್ಲಿ ವ್ಯಾಪ್ತಿಯಲ್ಲಿ ಪರಸ್ಪರ ಸಂಪರ್ಕ ಸಾಧಿಸುವುದರ ಜತೆಗೆ ಭದ್ರತೆಯ ವಿಚಾರದಲ್ಲೂ ಗಮನ ಹರಿಸಬೇಕಾಗಿದೆ. ಬಿಮ್‌ಸ್ಟೆಕ್ ರಾಷ್ಟ್ರಗಳ ಕಾರ್ಯಾಲಯ ನಿರ್ಮಾಣ ಮಾಡುವುದಕ್ಕೆ ಒಂದು ಮಿಲಿಯ ಅಮೆರಿಕನ್ ಡಾಲರ್ ನೆರವು ನೀಡುವುದಾಗಿಯೂ ಪ್ರಧಾನಿ ಘೋಷಣೆ ಮಾಡಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ವಿಚಾರವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ, ಕಳೆದ ಕೆಲವು ವಾರಗಳಲ್ಲಿ ಐರೋಪ್ಯ ಒಕ್ಕೂಟದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಿಮ್‌ಸ್ಟೆಕ್ ರಾಷ್ಟ್ರಗಳ ವ್ಯಾಪ್ತಿಗೂ ಸವಾಲಿನದ್ದೇ ಆಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಪರಸ್ಪರ ಸಹಕಾರ ಮತ್ತು ಭದ್ರತೆ ವಿಚಾರದಲ್ಲಿ ಮತ್ತಷ್ಟು ಸಹಮತ ಅಗತ್ಯವಾಗಿದೆ ಎಂದು ಬೊಟ್ಟು ಮಾಡಿದ್ದಾರೆ ಮೋದಿ. ಒಕ್ಕೂಟ ರಾಷ್ಟ್ರಗಳ ನಡುವೆ ಹವಾಮಾನ ವಿಚಾರದಲ್ಲಿ ಸಂಸ್ಥೆ ಸ್ಥಾಪಿಸುವದನ್ನೂ ಪ್ರಧಾನಿ ಪ್ರಸ್ತಾಪಿಸಿದ್ದಾರೆ. ಈ ಮೂಲಕ ಒಕ್ಕೂಟದಲ್ಲಿ ಮುಂದಿನ ದಿನಗಳಲ್ಲಿ ಉಂಟಾಗಬಹುದಾಗಿರುವ ಪ್ರಾಕೃತಿಪ ವಿಪತ್ತುಗಳ ಸಂದರ್ಭದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಲೂ ಸಾಧ್ಯವಾಗಲಿದೆ ಎಂದರು.
