ದೇಶದ 14 ಮಾಜಿ ಪ್ರಧಾನಿಗಳು ತಮ್ಮ ಆಡಳಿತಾವಧಿಯಲ್ಲಿ ರಾಷ್ಟ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ, ಗೌರವಿಸಲು ದೆಹಲಿಯ ನೆಹರು ಮ್ಯೂಸಿಯಂನಲ್ಲಿ ಕೇಂದ್ರ ಸರ್ಕಾರ ‘ಪ್ರಧಾನಮಂತ್ರಿ ಸಂಗ್ರಹಾಲಯ’ವನ್ನು ಸ್ಥಾಪನೆ ಮಾಡಿದೆ. ಇದನ್ನು ಏ.14ರಂದು ಉದ್ಘಾಟನೆ ಮಾಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಮಂಗಳವಾರ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಮೋದಿ ಅವರು, ಯಾವ ಪಕ್ಷದವರು ಎಂದು ಲೆಕ್ಕಿಸದೆ ಮಾಜಿ ಪ್ರಧಾನಿಗಳ ಕೊಡುಗೆಯನ್ನು ಗುರುತಿಸುತ್ತಿರುವ ಏಕೈಕ ಸರ್ಕಾರ ಎನ್‌ಡಿಎ ಸರ್ಕಾರವಾಗಿದೆ. ಎಲ್ಲ ಮಾಜಿ ಪ್ರಧಾನಿಗಳ ಸಾಧನೆಗೂ ಮನ್ನಣೆ ನೀಡಲಾಗಿದೆ ಎಂದು ಪ್ರಧಾನ ಮಂತ್ರಿಗಳು ತಿಳಿಸಿದ್ದಾರೆ.
ಸ್ವಾತಂತ್ರ್ಯಾ ನಂತರ 14 ಮಾಜಿ ಪ್ರಧಾನಿಗಳು ದೇಶವನ್ನು ಆಳಿದ್ದರೂ, ನೆಹರು- ಗಾಂಧಿ ಕುಟುಂಬದವರನ್ನು ಬಿಟ್ಟು ಬೇರೆಯವರನ್ನು ಕಾಂಗ್ರೆಸ್ ನಿರ್ಲಕ್ಷಿಸಿದೆ ಎಂದು ಬಿಜೆಪಿ ಮೊದಲಿನಿಂದಲೂ ಆರೋಪ ಮಾಡಿಕೊಂಡು ಬಂದಿದೆ. ಆದರೆ ಈಗ ಮಾಜಿ ಪ್ರಧಾನಿಗಳ ಮ್ಯೂಸಿಯಂ ಸ್ಥಾಪಿಸುವ ಮೂಲಕ ಆ ಪಕ್ಷಕ್ಕೆ ಹೊಸ ಠಕ್ಕರ್ ನೀಡಲು ಯತ್ನಿಸಿದೆ.