ರಾಜ್ಯದಲ್ಲಿ ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರವು ವಿನಯ ಸಾಮರಸ್ಯ ಎಂಬ ವಿನೂತನ ಯೋಜನೆ ಜಾರಿಗೆ ಮುಂದಾಗಿದೆ.
ಈ ಕುರಿತು ಸದನದಲ್ಲಿ ಮಾಹಿತಿ ನೀಡಿರುವ ಕೋಟಾ ಶ್ರೀನಿವಾಸ ಪೂಜಾರಿ, ಕೊಪ್ಪಳ ಜಿಲ್ಲೆಯ ಮಿಯಾಪುರ ಗ್ರಾಮದಲ್ಲಿ ಎರಡು ವರ್ಷದ ವಿನಯ್ ಆಕಸ್ಮಿಕವಾಗಿ ದೇವಾಲಯ ಪ್ರವೇಶಿಸಿದ್ದಕ್ಕೆ ಗ್ರಾಮಸ್ಥರು ಮಗುವಿಗೆ ಪೋಷಕರಿಗೆ ದಂಡ ವಿಧಿಸಿದ್ದಾರೆ.ಅಸ್ಪೃಶ್ಯತೆ ನಿವಾರಣೆಗೆ ಹಲವು ಕ್ರಮ ಕೈಗೊಂಡರೂ ಅಸ್ಪೃಶ್ಯತೆ ಇನ್ನೂ ತಾಂಡವಾಡುತ್ತಿದೆ ಎಂದರು.
ಅಸ್ಪೃಶ್ಯತೆಯನ್ನು ಹೋಗಲಾಡಿಸಿ ಸಾಮರಸ್ಯ ಕಾಪಾಡಲು ವಿನಯ ಸಾಮರಸ್ಯ ಎಂಬ ಯೋಜನೆಯನ್ನು ಪ್ರಾರಂಭಿಸಲಾಗುವುದು.
ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೆ ಚರ್ಚಿಸಲಾಗುವುದು. ರಾಜ್ಯದಲ್ಲಿನ 6020 ಗ್ರಾಮ ಪಂಚಾಯಿತಿಗಳಲ್ಲೂ ಅಸ್ಪೃಶ್ಯತೆ ವಿರುದ್ಧ ಸಾಮಾಜಿಕ ಸಾಮರಸ್ಯ ಕಾಪಾಡಲು ಸದಸ್ಯರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದ್ದಾರೆ.