ರಷ್ಯಾ ಉಕ್ರೇನ್‌ನಿಂದ ತೀವ್ರ ಪ್ರತಿರೋಧವನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಕೀವ್ ವಶಪಡಿಸಿಕೊಳ್ಳುವ ಗುರಿಯೊಂದಿಗೆ ರಷ್ಯಾ ತನ್ನ ಶಸ್ತ್ರಾಗಾರದಲ್ಲಿರುವ ಒಂದೊಂದು ಅಸ್ತ್ರವನ್ನೂ ಹೊರ ತೆಗೆಯುತ್ತಿದೆ.
ಈಗಾಗಲೇ ಎರಡು ಬಾರಿ ಕಿಂಜಾಲ್ ಹೈಪರ್ಸಾನಿಕ್ ಕ್ಷಿಪಣಿ ದಾಳಿ ನಡೆಸಿದ ಪುಟಿನ್ ಸೇನೆ, ಇತ್ತೀಚೆಗೆ ಮತ್ತೊಂದು ಶಕ್ತಿಶಾಲಿ ಅಸ್ತ್ರದ ಪ್ರಯೋಗ ಮಾಡಿದೆ ಎಂದು ಹೇಳಿಕೊಂಡಿದೆ.
ಕ್ಷಿಪಣಿಯನ್ನು ರಷ್ಯಾದ ಕಾರ್ವೆಟ್‌ನಿಂದ ಕ್ರೈಮಿಯಾದ ಸೆವಾಸ್ಟೊಪೋಲ್‌ನಲ್ಲಿ ಸಮುದ್ರದ ಮೇಲೆ ಉಡಾಯಿಸಲಾಗಿದೆ.
ಉಕ್ರೇನ್‌ನ ಒರ್ಜೆವಾದಲ್ಲಿರುವ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ಇದನ್ನು ಪ್ರಾರಂಭಿಸಲಾಯಿತು.
ಈ ಪ್ರದೇಶವು ರಾಜಧಾನಿ ಕೀವ್‌ನಿಂದ ಸುಮಾರು 200 ಮೈಲುಗಳಷ್ಟು ದೂರದಲ್ಲಿದೆ. ಈ ದಾಳಿಯಿಂದಾಗಿ ಪಾಶ್ಚ್ಯಾತ್ಯ ದೇಶಗಳು ನೀಡಿದ್ದ ಹಲವಾರು ಶಸ್ತ್ರಾಸ್ತ್ರಗಳು ದಾಳಿಯಲ್ಲಿ ನಾಶವಾದವು ಎಂದು ರಷ್ಯಾದ ಮಿಲಿಟರಿ ಹೇಳಿದೆ.
ಶತ್ರು ರಾಷ್ಟ್ರಗಳ ವಾಯು ಪ್ರದೇಶವನ್ನ ಭೇದಿಸಿ ಭೂಮಿಯ ಮೇಲಿನ ತನ್ನ ಗುರಿಯನ್ನ ತಲುಪಿ ನಾಶಪಡಿಸುವುದಕ್ಕೆ ಹೆಸರುವಾಸಿ ಈ ಕ್ಯಾಲಿಬರ್. ರಷ್ಯಾ ಈ ಕ್ಷಿಪಣಿಗಳನ್ನು ಅತ್ಯಂತ ನಿರ್ಣಾಯಕ ಗುರಿಗಳ ಮೇಲೆ ಮಾತ್ರ ಉಡಾಯಿಸುತ್ತದೆ. ಈ ಕ್ಷಿಪಣಿ ಭೂಮಿಗೆ ಕಡಿಮೆ ಎತ್ತರದಲ್ಲಿ ಹಾರಟ ನಡೆಸುತ್ತದೆ. ಸುಮಾರು 500 ಕೆಜಿಯ ವಾರ್ ಹೆಡ್ ಗಳನ್ನ ಹೊತ್ತೊಯ್ಯಬಲ್ಲ ಕ್ಯಾಲಿಬರ್ ಕ್ಷಿಪಣಿಯನ್ನು ಮಧ್ಯದಲ್ಲಿಯೇ ಹೇಗೆ ಬೇಕೋ ಹಾಗೆ ನಿಯಂತ್ರಿಸಬಹುದು. ಗೋದಾಮುಗಳು, ಕಮಾಂಡ್ ಪೋಸ್ಟ್‌ಗಳು, ಬಂದರುಗಳು ಮತ್ತು ವಿಮಾನ ನಿಲ್ದಾಣಗಳನ್ನು ನಾಶಮಾಡಲು ಕ್ಷಿಪಣಿಯನ್ನು ಬಳಸಲಾಗುತ್ತದೆ.