ಗೃಹಸಚಿವ ಆರಗ ಜ್ಞಾನೇಂದ್ರ ಅವರು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಭಾನುವಾರ ರಾತ್ರಿ ಹತ್ಯೆಯಾದ ಭಜರಂಗದಳ ಕಾರ್ಯಕರ್ತ ಹರ್ಷ ನ ಶವವನ್ನು ನೋಡಿ ಮೃತನ ತಂದೆ ತಾಯಿ ಹಾಗೂ ಸಹೋದರಿಯರೊಂದಿಗೆ ಮಾತನಾಡಿ. ಸಾಂತ್ವನ ಹೇಳಿ. ಅವರಲ್ಲಿ ವಿಶ್ವಾಸ ತುಂಬುವಂತಹ ಕೆಲಸ ಮಾಡಿದ್ದೇನೆ. ಆತನ ಕುಟುಂಬಸ್ಥರು ಮೃತ ಹರ್ಷನ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ಮನವಿ ಮಾಡಿದ್ದಾರೆ ಎಂದು ಸಚಿವರು ತಿಳಿಸಿದರು.
ಆದಷ್ಟು ಬೇಗ ಆರೋಪಿಗಳ ಹೆಡೆಮುರಿ ಕಟ್ಟಲು ಇಲಾಖೆ ಸಜ್ಜಾಗಿದೆ. ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಪರಿಸ್ಥಿತಿಯ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದೇನೆ. ಈಗಾಗಲೇ ಆರೋಪಿಗಳ ಸುಳಿವು ಸಿಕ್ಕಿದೆ. ತನಿಖೆಗೆ ಅಡ್ಡಿಯಾಗುವ ಕಾರಣದಿಂದ ಯಾವುದೇ ರೀತಿಯ ಮಾಹಿತಿಯನ್ನು ನಾನು ಬಹಿರಂಗಪಡಿಸಲು ಆಗುವುದಿಲ್ಲ ಎಂದು ಗೃಹಸಚಿವರ ಜ್ಞಾನೇಂದ್ರ ಅವರು ತಿಳಿಸಿದರು.
ಸಮಾಧಾನದ ಸಂಗತಿಯೆಂದರೆ ಆರೋಪಿಗಳ ಸುಳಿವು ಪತ್ತೆಯಾಗಿದ್ದು ಆರೋಪಿಗಳನ್ನು ಅತೀ ಶೀಘ್ರದಲ್ಲೇ ಬಂಧಿಸಲಾಗುವುದು. ಈ ಕೃತ್ಯದಲ್ಲಿ ನಾಲ್ಕರಿಂದ ಐದು ಜನ ಅಪರಾಧಿಗಳ ಕೈವಾಡವಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಇನ್ನೂ ಖಚಿತ ಪಡಿಸಬೇಕಾಗಿದೆ. ಶಿವಮೊಗ್ಗ ನಗರದಲ್ಲಿ ರೀತಿಯ ಕೃತ್ಯ ನಡೆದಿರುವುದು ಅತ್ಯಂತ ದುರದೃಷ್ಟಕರ ಇದನ್ನು ನಾನು ಖಂಡಿಸುತ್ತೇನೆ ಹಾಗೂ ಈ ಪ್ರಕರಣದಲ್ಲಿ ನಾವು ಒಂದು ಸ್ಪಷ್ಟವಾದ ಸಂದೇಶವನ್ನು ಕೊಡುತ್ತೇವೆ. ಈರೀತಿಯ ವಿಕೃತ ಭಾವನೆಯಿಂದ ಏನು ಬೇಕಾದರೂ ಮಾಡಿ ಬಚಾವ್ ಆಗಬಹುದು ಎಂಬುದು ಇನ್ನೂ ಮುಂದೆ ಆಗುವುದಿಲ್ಲ ಎಂದು ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು.