ಭಾವೈಕ್ಯ ಮೂರ್ತಿ , ಕನ್ನಡದ ಕಬೀರ,ಸೂಫಿ ಸಂತರೆಂದೇ ಖ್ಯಾತರಾದ ಇಬ್ರಾಹಿಂ ಸುತಾರ ಅವರು ಇಂದು ನಮ್ಮೊಂದಿಗಿಲ್ಲ. ಅವರ ಜೀವನದ ಕುರಿತ ಒಂದಷ್ಟು ಮಾಹಿತಿಯನ್ನ ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೆವೆ. ಭಾವೈಕ್ಯತೆ, ಸೌಹಾರ್ದತೆ ಸಮಾನತೆಯ ಸಂದೇಶವನ್ನು ಜೀವನದುದ್ದಕ್ಕೂ ಸಾರುತ್ತಾ ಜನಮನದಲ್ಲಿ ಹಾಸುಹೊಕ್ಕಾಗಿದ್ದರು ಇಬ್ರಾಹಿಂ ಸುತಾರ. 1940 ಮೇ 10ರಂದು ಬಾಗಲಕೋಟೆಯ ಮಹಾಲಿಂಗಪುರದಲ್ಲಿ ಇವರು ಜನಿಸುತ್ತಾರೆ. ಇವರ ತಂದೆ ನಬಿಸಾಹೇಬ್. ತಾಯಿ ಅಮೀನಾಬಿ. ಬಡತನದಿಂದಾಗಿ ಇಬ್ರಾಹಿಂ ಸುತಾರ ಅವರು ಮೂರನೇ ತರಗತಿಯನ್ನು ಮಾತ್ರ ಮುಗಿಸುತ್ತಾರೆ. ಓದಿದ್ದು ಮೂರನೇ ತರಗತಿಯ ಆದ್ರೂ ಸಮಾಜಕ್ಕೆ ಭಾವೈಕ್ಯತೆಯನ್ನು ಸಾರುತ್ತಾ ಸೂಫಿಸಂತರಾದರು. ಜೀವನ ನಡೆಸುವುದಕ್ಕಾಗಿ ನೇಕಾರಿಕೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡರು. ಬಾಲ್ಯದಲ್ಲಿಯೇ ಮಸೀದಿಯಲ್ಲಿ ನಮಾಜ್ ಕಲಿತು ,ಕುರಾನ್ ಅಧ್ಯಯನವನ್ನೂ ನಡೆಸುತ್ತಾರೆ. ಅನ್ಯಧರ್ಮಗಳ ಕುರಿತು ತಿಳಿಯಬೇಕೆಂದು ತಮ್ಮದೇ ಊರಿನ ಭಜನಾ ಸಂಘದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಈ ಮೂಲಕ ವಿವಿಧ ಧರ್ಮಗಳ ಕುರಿತು ಅಪಾರ ಜ್ಞಾನವನ್ನು ಪಡೆಯುತ್ತಾರೆ. ಉಪನಿಷತ್ತಿನ ಸಾರ ಅರಿತುಕೊಂಡ ಇವರು ರಂಜಾನ್ ವೇಳೆ ಮುಂಜಾನೆ ಜನರನ್ನು ಎಬ್ಬಿಸಲು ಹಳ್ಳಿಗಳಿಗೆ ಹಾಡುತ್ತ ಹೋಗುತ್ತಿದ್ದ ತಂಡದಲ್ಲಿ ಸಂಚರಿಸಿ ಜೀವನಾನುಭವ ಪಡೆದುಕೊಳ್ಳುತ್ತಾರೆ. ಮಹಾಲಿಂಗಪುರದ ಬಸವಾನಂದ ಸ್ವಾಮಿಗಳ ಪುಣ್ಯಾರಾಧನೆ ನಿಮಿತ್ತ ಪ್ರತಿವರ್ಷ ಒಂದು ತಿಂಗಳ ಕಾಲ ಬೆಳಗ್ಗೆ ಹಾಗೂ ಸಂಜೆ ನಡೆಯುತ್ತಿದ್ದ ಪ್ರವಚನಗಳನ್ನು ತಪ್ಪದೇ ಕೇಳುತ್ತಿರುತ್ತಾರೆ. ಅಲ್ಲಿನ ಧಾರ್ಮಿಕ ಚಿಂತನೆಗಳು ನನ್ನ ತಿಳುವಳಿಕೆ ವಿಸ್ತರಿಸಲು ನೆರವಾಯಿತು ಎಂದು ಸುತಾರ ಅವರು ಸದಾ ಸ್ಮರಿಸಿ ಕೊಳ್ಳುತ್ತಿದ್ದರು. ನಾವೆಲ್ಲರೂ ಭಾರತೀಯರು. ನಮ್ಮಲ್ಲಿಯೇ ಭೇದ ಭಾವವೇಕೆ? ನಾವೆಲ್ಲರೂ ಒಂದೇ. ಎಲ್ಲಾ ಧರ್ಮಗಳು ಒಂದೇ. ಪರಮಾತ್ಮನನ್ನು ಕಾಣುವ ರೀತಿಯು ಒಂದೇ ಎಂಬ ದಾರ್ಶನಿಕ ಐಕ್ಯತೆ ಸಾರುತ್ತಾ, ಸದಾ ಹಸನ್ಮುಖಿಗಳಾಗಿ ಭಾವೈಕ್ಯತೆ ಸಾರಿದ ಕನ್ನಡದ ಕಬೀರ ಇವರು. ನಗುಮೊಗದಿಂದಲೇ ತಮ್ಮ ನಡೆ ನುಡಿ ಬದಲಾಯಿಸುತ್ತಾ ಪ್ರವಚನದಿಂದಲೇ ಪದ್ಮಶ್ರೀ ಪಡೆದವರು ಇಬ್ರಾಹಿಂ ಸುತಾರ. ಅಂದಹಾಗೆ, 82 ವರ್ಷ ದಾಟಿದರೂ ವಯಸ್ಸಿನ ಮಿತಿಯನ್ನೂ ಮೀರಿ ಕುರಾನ್, ಭಗವದ್ಗೀತೆ, ವಚನಗಳನ್ನು ನಿರ್ಗಳವಾಗಿ ಹೇಳುತ್ತಿದ್ದರು. ತತ್ವ ಪದಗಳ ಸಂಗ್ರಹ, ಪರಮಾರ್ಥ ಲಹರಿ, ತತ್ವಜ್ಞಾನಕ್ಕೆ ಸರ್ವರು, ಅಧಿಕಾರಿಗಳಿಂದ ಚಿಂತನಾ ಗ್ರಂಥ, ನಾವೆಲ್ಲಾ ಭಾರತೀಯರೆಂಬ ಕವನಸಂಕಲನವನ್ನು ಇವರು ರಚಿಸಿದ್ದರು. ಇವರಿಗೆ 1995ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಹಾಗೂ 2018ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇಬ್ರಾಹಿಂ ಸುತಾರ ಅವರ ಮಾತುಗಳು ಮತ್ತು ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಹೆಚ್ಚು ವೈರಲ್ ಆಗಿವೆ. ಇವರ ಭಜನೆ ತತ್ವ ಪದಗಳ ಸುರುಳಿಗಳು ಬಿಡುಗಡೆಯಾಗಿವೆ. ಎಷ್ಟೇ ಗಂಭೀರವಾದ ವಿಷಯವಾದರೂ ಜನಮನಕ್ಕೆ ಅದು ಕಬ್ಬಿಣದ ಕಡಲೆಯಾದಿತು ಎಂಬ ಆತಂಕ ಅವರಿಗೆ ಗೊತ್ತಿತ್ತು. ಹೀಗಿದ್ದೂ ನಿಜಗುಣರ ಪರಮಾರ್ಥ ವಿಷಯಗಳನ್ನು ಹೇಳುವಾಗ, ತಮ್ಮ ತಂಡದವರ ಸಂಗಡ ಲಘು ಧಾಟಿಯಿಂದ ಸಂಭಾಷಣೆ ನಡೆಸುತ್ತಿದ್ದರು. ಆ ಮೂಲಕ ಎಂಥದ್ದೇ ತತ್ವ ವಿಚಾರಗಳು ಜನರ ಮನಸ್ಸಿಗೆ ಸುಲಿದ ಬಾಳೆ ಹಣ್ಣಿನಂದದಿ ಅರ್ಥವಾಗುವಂತೆ ಮಾಡುತ್ತಿದ್ದರು. ಇದು ಅವರ ಪ್ರವಚನದ ಒಂದು ಯಶಸ್ವಿ ಕಲೆಯಾಗಿತ್ತು. ಧಾರ್ಮಿಕ ಸಾಮರಸ್ಯದ ವಿಷಯಗಳನ್ನ ಅತ್ಯಂತ ಸರಳವಾಗಿ ಮಗುವಿನ ಮನಸ್ಸಿಗೆ ನಾಟುವಂತೆ ಹೇಳುವ ಕಲೆ ಸುತಾರ ಅವರಿಗೆ ದೇವರು ಕೊಟ್ಟ ವರವಾಗಿತ್ತು. ಇಂದಿನ ಧಾರ್ಮಿಕ ಸಂಘರ್ಷದಲ್ಲಿ ಮನುಷ್ಯ ಜೀವನ ಅತ್ಯಂತ ಸಾಮಾಜಿಕ ತಲ್ಲಣವನ್ನು ಉಂಟು ಮಾಡುತ್ತಿದೆ. ಇಂತಹ ತಲ್ಲಣ, ಆತಂಕ, ಅಶಾಂತಿ, ಇವುಗಳಿಗೆ ಸುತಾರ ಅವರ ಸಿಹಿ ನುಡಿಗಳು ಅಮೃತಸಿಂಚನ. ಶರೀಫರು ತಮ್ಮ ತತ್ವಪದಗಳ ಮೂಲಕ ಸುಲಭ ಸಾಧ್ಯವಾದ ಧಾರ್ಮಿಕ ಚಿಂತನೆಗಳನ್ನ ಗೇಯ ರೂಪದಲ್ಲಿ ನಮಗೆ ಕೊಟ್ಟರು. ಅದೇ ರೀತಿ ಇಬ್ರಾಹಿಂ ಸುತಾರ್ ಅವರು ನಮಗೆ ಮನುಷ್ಯರು ಮನುಷ್ಯರಾಗಿ ಬಾಳಲು ತಮ್ಮ ಸರಳ ಪ್ರವಚನದ ಮೂಲಕ ಮಾರ್ಗದರ್ಶಿಯಾಗಿದ್ದಾರೆ. ಫೆಬ್ರುವರಿ 5, 2022 ರಂದು ತಮ್ಮ 82ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಇವರು ನಿಧನರಾದರು. ಪರಮಾರ್ಥ ಜಟಿಲ ಸಂಗತಿಗಳನ್ನ ಪದರು ಪದರಾಗಿ ಬಿಡಿಸಿ ಹೇಳುತ್ತಿದ್ದ ಅವರ ನುಡಿಗಳೇ ನಮಗೆ ದಾರಿದೀಪ.
ಮನುಜರೆಲ್ಲ ಒಂದೇ ಎಂದ ಮಹಾನುಭಾವ
Date: