ಬೀಚ್ ಎಂದಾಕ್ಷಣ, ನಮಗೆ ತಕ್ಷಣ ನೆನಪಾಗುವುದು ಗೋವಾ ಬೀಚ್. ಆದ್ರೆ ನಮ್ಮ ರಾಜ್ಯದಲ್ಲಿ ಅನೇಕ ಸುಂದರವಾದ ಬೀಚ್ ಗಳಿವೆ ಕಂಡ್ರೀ… ಅವುಗಳ ಪೈಕಿ ಯಲ್ಲಿ ಕಾಪು ಬೀಚ್ ಕೂಡ ಒಂದಾಗಿದೆ. ಎಲ್ಲಿದೆ ಕಾಪು ಬೀಚ್? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ಬೀಚ್ ಉಡುಪಿ ಜಿಲ್ಲೆಯಲ್ಲಿನ ಅನೇಕ ಬೀಚ್ ಗಳಲ್ಲಿ ಈ ಬೀಚ್ ಕೂಡ ಪ್ರಸಿದ್ಧಿಯಾಗಿದೆ. ಮಂಗಳೂರಿನಿಂದ ಸುಮಾರು 45 ಕಿ.ಮೀ. ಮತ್ತು ಉಡುಪಿಯಿಂದ ಸುಮಾರು 15 ಕಿ. ಮೀ. ದೂರದಲ್ಲಿದೆ.
ಮಂಗಳೂರು- ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ 17ರಲ್ಲಿದೆ ಕಾಪು. ಕಾಪು ಪೇಟೆಯಲ್ಲಿ ಇಳಿದು, ಪಶ್ಚಿಮಕ್ಕೆ ನಡೆದು ಬಂದ್ರೆ, ಕಾಣಸಿಗುವುದೇ ನೀರಿನ ವಿಶಾಲವಾದ ಸಮುದ್ರ. ಅದೇ ನೀವು ನೋಡದಿರುವ ಕಾಪು ಬೀಚ್ ಕಂಡ್ರೀ…
ಅರಬ್ಬಿ ಸಮುದ್ರದ ಭಾಗವಾಗಿರುವ ಈ ಬೀಚ್ ಪ್ರಕೃತಿದತ್ತವಾಗಿ ರೂಪುಗೊಂಡಿದೆ. ಅಬ್ಬಬ್ಬಾ…! ಎಲ್ಲಿ ನೋಡಿದ್ರು ನೀಲಿಬಣ್ಣದ ವಿಶಾಲವಾದ ನೀರು.ಅಲ್ಲಲ್ಲಿ ಬಂಡೆಗಳು. ಕ್ಷಣಕ್ಕೊಮ್ಮೆ ಬರುವಂತಹ ಅಲೆಗಳು. ಆಹಾ! ಆ ಸೌಂದರ್ಯವನ್ನು ನೋಡೋಕೆ ಎರಡು ಕಣ್ಣುಗಳು ಸಾಲದು.
ಈ ಬೀಚ್ ಸೌಂದರ್ಯವನ್ನು ವೀಕ್ಷಿಸೋಕೆ ನಮ್ಮ ರಾಜ್ಯಗಳಿಂದ ಅಲ್ಲದೇ, ಬೇರೆ ರಾಜ್ಯಗಳಿಂದಲೂ ಸಹ ಪ್ರವಾಸಿಗರು ಬರುತ್ತಾರೆ. ಸಮುದ್ರಗಳ ಅಲೆಗಳೊಂದಿಗೆ ಆಟ ಆಡೋಕೆ ಒಂದುಸಲ ಸಮುದ್ರಕ್ಕೆ ಇಳಿದರೆ, ಸಮುದ್ರದಿಂದ ಆಚೆ ಬರೋಕೆ ಮನಸ್ಸೇ ಆಗಲ್ಲ ಕಣ್ರೀ…
ಮುಸ್ಸಂಜೆ ವೇಳೆಯಂತೂ ವಾ! ಹೇಳಲು ಅಸಾಧ್ಯ… ಯಾಕಂದ್ರೆ, ಈ ವೇಳೆಯಲ್ಲಿ ಅರಬ್ಬಿ ಸಮುದ್ರ ವೀಕ್ಷಿಸಿದರೆ, ಆ ತುದಿಯಲ್ಲಿ ಸಮುದ್ರದ ಒಳಗೆ ಸೂರ್ಯ ಅವಿತು ಕುಳಿತಂತೆ ಭಾಸವಾಗುತ್ತೇ.
ನಿಜಕ್ಕೂ ಇಂತಹ ರಮಣೀಯ ನೋಟವನ್ನು ವೀಕ್ಷಿಸುವುದಾದರೆ ಇಂತಹ ಬೀಚ್ ಗಳ ತೀರಕ್ಕೆ ಬರಬೇಕು. ಈ ಸ್ಥಳ ತೆಂಗಿನ ಮರಗಳು ಹಸಿರಿನಿಂದ ಕಂಗೊಳಿಸುವಂತಹ ಸುಂದರ ತಾಣ ಇದಾಗಿದೆ. ಈ ಸಮುದ್ರತೀರದ ಸಮೀಪದಲ್ಲಿ ಜೈನ ಬಸದಿಗಳ ಅವಶೇಷಗಳು ಕೂಡ ಇದೆ. ಮತ್ತೊಂದು ವಿಶೇಷ ಅಂದ್ರೆ ಈ ಬೀಚ್ ಕಾಪು ದೀಪಸ್ತಂಬವನ್ನು ಒಳಗೊಂಡಿದೆ. ಕಾಪು ದೀಪಸ್ತಂಬವನ್ನು 1901 ರಲ್ಲಿ ನಿರ್ಮಿಸಲಾಗಿದೆ. ಈ ದೀಪಸ್ತಂಬವು ಸುಮಾರು 27 ಮೀಟರ್ ಎತ್ತರವಿದೆ. ಈ ದೀಪಸ್ತಂಭವನ್ನು ಬಂಡೆಯ ಮೇಲೆ ನಿರ್ಮಿಸಲಾಗಿದೆ. ಮತ್ತು ಶತಮಾನಗಳು ಕಳೆದರೂ ಸಹ, ಸುಭದ್ರವಾಗಿ ನಿಂತಿದೆ. ಹಿಂದಿನ ಕಾಲದಲ್ಲಿ ಉಪಗ್ರಹಗಳ ಆಧಾರಿತ ತಂತ್ರಜ್ಞಾನ ಮತ್ತು ಮಾರ್ಗದರ್ಶಕ ಇರಲಿಲ್ಲ. ಆದ್ದರಿಂದ ಕಡಲ ತೀರದಲ್ಲಿರುವ ದೀಪಸ್ತಂಭಗಳು ಹಡಗಿನ ನಾವಿಕರಿಗೆ ದಾರಿದೀಪ ಗಳಾಗಿದ್ದವು.
ಕಾಪು ದೀಪಸ್ತಂಭವು ಪ್ರತಿದಿನ ಸಂಜೆ 4ರಿಂದ 6ರವರೆಗೆ ಪ್ರವಾಸಿಗರಿಗೆ ತೆರೆದಿರುತ್ತದೆ. ಇಲ್ಲಿ ಪ್ರವಾಸಿಗರು ಮೆಟ್ಟಿಲುಗಳನ್ನು ಹತ್ತಿ ಹೋಗಿ ಸಮುದ್ರವನ್ನು ವೀಕ್ಷಿಸಬಹುದು.
ಕೆಲವು ವರ್ಷಗಳ ಹಿಂದೆ ಕಾಪು ಸಮುದ್ರ ಅವ್ಯವಸ್ಥೆ ಗೊಂಡಿತ್ತು. ಆದರೆ ಈಗ ಅಭಿವೃದ್ಧಿಯನ್ನು ಕಂಡಿದೆ. ನಾವು ಎಷ್ಟೋ ಬೀಚ್ ಗಳನ್ನು ನೋಡಿರುತ್ತೇವೆ. ಅಲ್ಲಲ್ಲಿ ಕಸದ ರಾಶಿ, ಪ್ಲಾಸ್ಟಿಕ್, ಇತ್ಯಾದಿ ತ್ಯಾಜ್ಯ ವಸ್ತುಗಳು ಅಲ್ಲಲ್ಲಿ ಬಿದ್ದಿರುತ್ತವೆ. ಆದ್ರೆ ಇಲ್ಲಿನ ಸಮುದ್ರದ ತೀರದಲ್ಲಿ ಯಾವುದೇ ರೀತಿಯ ಪ್ಲಾಸ್ಟಿಕ್, ತ್ಯಾಜ್ಯವಸ್ತುಗಳು ಕಾಣಸಿಗುವುದಿಲ್ಲ. ಸಮುದ್ರತೀರ ಸ್ವಚ್ಛಂದವಾಗಿ ಕಂಗೊಳಿಸುತ್ತಿದೆ. ಇಲ್ಲಿನ ಪ್ರತಿಯೊಂದು ವ್ಯವಸ್ಥೆ ಕೂಡ ಚೆನ್ನಾಗಿದೆ. ಈ ವ್ಯವಸ್ಥೆ ರೂಪುಗೊಳ್ಳಲು ಕಾರಣಕರ್ತರಾದ ಅಲ್ಲಿನ ಸಿಬ್ಬಂದಿ ವರ್ಗ ಮತ್ತು ಅಲ್ಲಿನ ವ್ಯವಸ್ಥಾಪಕರ ಕಾರ್ಯ ಪ್ರಶಂಸನೀಯ.
ಪ್ರವಾಸಿಗರಿಗೆ ಮನಸ್ಸಿಗೆ ಮುದ ನೀಡುವಂತಹ ಒಂದೊಳ್ಳೆ ತಾಣ ಕಾಪುಬೀಚ್ ಆಗಿದೆ. ನೀವು ಬೀಚಿನ ಸೌಂದರ್ಯವನ್ನು ಅನುಭವಿಸಬೇಕಾದರೇ, ಒಂದೊಮ್ಮೆ ನಿಮ್ಮ ಕುಟುಂಬದವರೊಂದಿಗೆ ಇಲ್ಲಿಗೆ ಭೇಟಿ ನೀಡಿ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ.