ಕೋವಿಶೀಲ್ಡ್ ಲಸಿಕೆಯ 50 ಲಕ್ಷ ಡೋಸ್ ಗಳು ಮಾಸಾಂತ್ಯದ ವೇಳೆಗೆ ಹಾಳಾಗುತ್ತದೆ ಎಂಬ ಕುರಿತು ಮಾಧ್ಯಮಗಳ ವರದಿಯನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ.
ಕೊರೋನಾ ನಿರೋಧಕ ಲಸಿಕೆ ಅಭಿಯಾನದ ಆರಂಭದಲ್ಲಿಯೇ ಲಸಿಕೆಗಳ ಅವಧಿ ಮುಗಿಯುವ ಮುನ್ನವೇ ನೀಡುವ ಮತ್ತು ಹಾಳಾಗದಂತೆ ನೋಡಿಕೊಳ್ಳುವ ಕುರಿತು ಆಯಾ ರಾಜ್ಯಗಳಿಗೆ ಸೂಚಿಸಲಾಗಿದೆ. ಇದರಿಂದಾಗಿ ಲಸಿಕೆಗಳ ಅವಧಿ ಮುಗಿಯುವ ಪ್ರಮಾಣ ತೀರ ಕಡಿಮೆಯಾಗಿದೆ. ಹಾಗಾಗಿ ಮಾಸಾಂತ್ಯದ ವೇಳೆಗೆ 50ಲಕ್ಷ ಡೋಸ್ ಗಳ ಅವಧಿ ಮುಗಿಯುತ್ತದೆ ಎಂಬ ಕುರಿತು ಮಾಧ್ಯಮಗಳ ವರದಿ ಸುಳ್ಳು ಮಾಹಿತಿಯಿಂದ ಕೂಡಿದೆ. ಜನರ ದಾರಿ ತಪ್ಪಿಸುವ ರೀತಿಯಲ್ಲಿ ವರದಿ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆಗಳ ಸಂಗ್ರಹ ಮತ್ತು ವಿತರಣೆಗೆ ಸಮರ್ಪಕವಾಗಿ ವ್ಯವಸ್ಥೆ ಮಾಡಲಾಗಿದೆ. ಆಯಾ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಕುರಿತು ನಿರ್ದೇಶನ ನೀಡಲಾಗಿದೆ. ಲಸಿಕೆಗಳ ಅವಧಿ ಮುಗಿಯುವ ಮುನ್ನವೇ ಜನರಿಗೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿಯನ್ನು ತಿಳಿಸಿದೆ.