ಸಲಗಕ್ಕೆ ಶಾಲೆಯಲ್ಲೇನು ಕೆಲಸ?
ಹೌದು! ಗಂಡಾನೆಗೆ ಸ್ಕೂಲಿಗೆ ಹೋಗುವ ಆಸೆ ಬಂತೆ? ಅಂತ ನೀವು ಕೇಳಬಹುದು.
ಆದರೆ ಅದಕ್ಕೆ ಉತ್ತರ ಹೌದು ಅಂತ ಹೇಳಲು ಆನೆ ಭಾಷೆ ಬಲ್ಲವರು ಮಾತ್ರ ಏನಾದರೂ ಅರ್ಥ ಹೇಳಿಯಾರು. ಒಂದಂತೂ ನಿಜ.
ಸಲಗವೊಂದು ಶಾಲೆಯ ಆವರಣಕ್ಕೆ ನುಗ್ಗಿ ಒಂದೆರಡು ಗಂಟೆ ಪುಟ್ಟ ವಿದ್ಯಾರ್ಥಿಗಳನ್ನ,
ಶಿಕ್ಷಕ ಸಿಬ್ಬಂದಿಯನ್ನ ಅಧೀರಗೊಳಿಸಿ,ಅಂಗೈಲ್ಲಿ ಜೀವ ಹಿಡಿದುಕೊಳ್ಳುವಂತೆಮಾಡಿದ ಘಟನೆ.
ಎಲ್ಲಿ? ಯಾವಾಗ? ಅಂತ ನಿಮ್ಮಲ್ಲಿ ಕುತೂಹಲ ಮೂಡೋದು ಸಹಜ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ನಾಗಪುರ ಹಾಡಿಯ ಶಾಲೆಯ
ಪರಿಸರದಲ್ಲಿ ಒಂಟಿ ಸಲಗ ಒಂದಿಷ್ಟು ಗಂಟೆ ರಾಜಾರೋಷ ಅಡ್ಡಾಡಿದೆ.
ಗುರುವಾರ ಅಂದರೆ ಫೆಬ್ರವರಿ ಮೂರನೇ ತಾರೀಖಿನಂದು ಸಲಗ ನಡೆಸಿದ ತಾಜಾ
ಪೌರುಷ ಪ್ರದರ್ಶನ ಪುರಾಣ.
ಅಂಥಾದ್ದೇನು ಪೌರಷ ಅಂದ್ರೆ…ಒಂದು ಮೋಟಾರು ಬೈಕು, ಮಕ್ಕಳ ಸೈಕಲ್ಲು ಸ್ಟ್ಯಾಂಡು, ಅಷ್ಟೇ ಅಲ್ಲ ಸನಿಹದ ಮನೆಯೊಂದನ್ನು ತನ್ನ
ಕೋರೆದಾಡಿಗಳಿಂದ ಜಖಂಗೊಳಿಸಿದೆ.
ಅಂದು ಹಾಜರಾಗಿದ್ದ 129 ಮಕ್ಕಳು ಬೆಳಗಿನ ಪ್ರಾರ್ಥನೆಗೆ ಸಾಲಾಗಿ ನಿಂತಿದ್ದರು.
ಸಮೀಪದ ನಾಗರಹೊಳೆ ಅರಣ್ಯದಿಂದ ಈ ಸಲಗ ಮಹಾಶಯ ಮಕ್ಕಳೊಂದಿಗೆ ತಾನೂ ಬೆರೆಯಬೇಕೆಂಬ ಅಥವಾ ತನ್ನ ತುಂಟಾಡವನ್ನ ಎಳೆಯರು ನೋಡಲಿ ಅಂತಲೋ ದಂತಗಳನ್ನ ತೋರಿಸಿ, ಸೊಂಡಿಲು ಬೀಸುತ್ತಾ
ಬಂದ ಗಜರಾಜ. ತೀರ ಸಣ್ಣಾನೆಯಲ್ಲ ಅಂತ ನೋಡಿದವರು ಹೇಳುತ್ತಾರೆ.
ಸಾಲಾಗಿ ಮಕ್ಕಳು ನಿಂತಿದ್ದಾರೆ.ಅಷ್ಟರಲ್ಲಿ ಹಾಡಿಯ ಮಂದಿಗೆ
ಸೊಂಡಿಲು ಬೀದಿ,ದಪದಪ ಹೆಜ್ಜೆ ಹಾಕುತ್ತಾ ಬಂದ ಸಲಗವನ್ನ ನೋಡಿ ಕೂಗಿದರು. ಇನ್ನೇನು ಶಾಲಾ ಕಾಂಪೌಡಿನ ಮುಖ್ಯ ದ್ವಾರದ ಬಳಿ ಬರುತ್ತಿದ್ದಂತೇ ಗ್ರಾಮಸ್ಥರ ಕೂಗು ಕೇಳಿ ಶಿಕ್ಷಕ ರಾಮಚಂದ್ರಪ್ಪ ಜಾಗೃತರಾದರು.ತಕ್ಷಣ ಅಷ್ಟೂ ಮಕ್ಕಳನ್ನ ಸುರಕ್ಷಿತವಾಗಿ ಶಾಲಾ ತರಗತಿ ಕೊಠಡಿಯೊಳಕ್ಕೆ ಸರಸರನೆ ಕಳಿಸಿ ಬಾಗಿಲ ಬೋಲ್ಟು ಒಳಗಿನಿಂದ ಹಾಕಿ ಭದ್ರಪಡಿಸಿದರು.
ಆಗ ಸಮಯ,ಬೆಳಗ್ಗೆ ಒಂಬತ್ತೂ ಮುಕ್ಕಾಲಾಗಿತ್ತು. ಹೀಗೆ ನುಗ್ಗಿದ ಸಲಗವನ್ನ ಕಂಡ ಮಕ್ಕಳು ಸುಮ್ಮನೆ ಕೂರುತ್ತಾರೆಯೆ?
ಶಾಲಾ ಗೇಟನ್ನ ಒಂದೇಏಟಿಗೆ ಬಿಸಾಕಿ ಬಂದ ಬಿರುಸಿಗೆ ಎಲ್ಲರೂ ಹೌಹಾರಿದರು.
ಈ ನಾಗಪುರ ಗ್ರಾಮವು ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಿಂದ ಅರವತ್ತು ಕಿಮೀ ದೂರದ ಫಾಸಲೆಯಲ್ಲಿದೆ.
ಸುಮಾರು ಹನ್ನೊಂದುವರೆಯ ತನಕ ಶಾಲೆಯ ಕೊಠಡಿಗಳು, ಅರಚುತ್ತಿದ್ದ ಬಾಯಿಗಳು ಬೀಗ ಹಾಕಿ ಕೊಂಡು ಮೌನಾಧ್ಯಾನದಲ್ಲಿದ್ದವು.
ಸದ್ಯ ಸಲಗ ಶಿಕ್ಷಕರೊಬ್ಬರ ಬೈಕನ್ನ ಹಾಳು ಮಾಡಿದೆ. ಸೈಕಲ್ ಸ್ಡ್ಯಾಂಡನ್ನ ಅಪ್ಪಚ್ಚಿ ಮಾಡಿದೆ. ಶಾಲಾಪರಿಸರದ ಹೊರಗಿದ್ದ ಮನೆಗೂ
ತಿವಿದು ಹತ್ತಿರದ ಕಾಡೊಳ ಹೊಕ್ಕು ಮಾಯವಾಗಿದೆ.
“ಇಷ್ಟು ಬಿಟ್ಟರೆ ಮತ್ತೇನನ್ನೂ ಹಾನಿ ಮಾಡಿಲ್ಲ ಎಂದು ಬರೆಯಿರಿ”ಅಂತ
ಮುಖ್ಯೋಪಾಧ್ಯಾಯರಿಗೆ ಹೇಳಿದಂತೆ ಬಾಲ ಬೀಸುತ್ತ ಮಕ್ಕಳಿಗೆ ಟಾಟಾ ಮಾಡಿ ಹೋಗಿರಬಹುದು ಅಲ್ಲವೆ?.