ಭಾರತದ ಹಿರಿಯರ ಕ್ರಿಕೆಟ್ ತಂಡ ಇತ್ತೀಚೆಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿಗಳೆರಡರಲ್ಲೂ ಸೋತಿದ್ದರಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಶೆ ಉಂಟಾಗಿದೆ.
ಆದರೆ ಇದೀಗ ಕೆರಿಬಿಯನ್ ನಾಡಿನಲ್ಲಿ 19ರ ವಯೋಮಿತಿ ಏಕದಿನ ವಿಶ್ವಕಪ್ ಆಡುತ್ತಿರುವ ಯಶ್ ಧುಲ್ ಸಾರಥ್ಯದ ಕಿರಿಯರ ತಂಡ ಒಂದರ ನಂತರ ಇನ್ನೊಂದು ಎಂಬಂತೆ ಸಿಹಿಸುದ್ದಿ ಗಳ ಸರಮಾಲೆಯನ್ನೇ ಹೆಣೆಯುತ್ತಿದೆ.
ಅಜೇಯ ತಂಡವೆನಿಸಿಕೊಂಡು ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದ ಭಾರತ ತಂಡ ಬುಧವಾರ ರಾತ್ರಿ ನಡೆದ ಸೂಪರ್ ಲೀಗ್ ಸೆಮಿಫೈನಲ್ಸ್ ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 96 ರನ್ ಗಳ ಅಂತರದಿಂದ ಹಿಮ್ಮೆಟ್ಟಿಸಿ ಪ್ರಶಸ್ತಿ ಹೊಸ್ತಿಲು ತಲುಪಿದೆ.
ಕಿರಿಯರ ಏಕದಿನ ವಿಶ್ವಕಪ್ ನಲ್ಲಿ ಭಾರತ ಫೈನಲ್ ಪ್ರವೇಶಿಸಿರುವುದು ಇದು ಸತತ ನಾಲ್ಕನೇ ಬಾರಿ ಎನ್ನುವುದು ಗಮನಾರ್ಹ.
ಶನಿವಾರ ನಡೆಯಲಿರುವ ಪ್ರಶಸ್ತಿ ಫೈಟ್ ನಲ್ಲಿ ಭಾರತಕ್ಕೆ 1998ರ ಆವೃತ್ತಿಯ ಚಾಂಪಿಯನ್ ಇಂಗ್ಲೆಂಡ್ ಎದುರಾಳಿಯಾಗಲಿದೆ. ಅಂದು ಆಂಗ್ಲರನ್ನೂ ಸೋಲಿಸಿದಲ್ಲಿ ಭಾರತ 14 ಆವೃತ್ತಿಗಳಲ್ಲಿ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದಂತಾಗಲಿದೆ.
ಕೂಲಿಡ್ಜ್ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ, ನಾಯಕ ಯಶ್ ಧುಲ್ (110) ಹಾಗೂ ಉಪ ನಾಯಕ ಶೇಖ್ ರಶೀದ್ (94) ಜೋಡಿಯ 204 ರನ್ ಗಳ 3ನೇ ವಿಕೆಟ್ ಜೊತೆಯಾಟದ ನೆರವಿನಿಂದ 290 ರನ್ ಕಲೆ ಹಾಕಿತು.
ಇದು ಭಾರತದ 19ರ ವಯೋಮಿತಿ ತಂಡಕ್ಕೆ ಆಸ್ಟ್ರೇಲಿಯ ವಿರುದ್ಧ ವಿಶ್ವಕಪ್ ನಲ್ಲಿ ಲಭಿಸಿದ ಸತತ ಆರನೇ ಗೆಲುವಾಗಿದೆ. ಟೂರ್ನಿಯ ಇತಿಹಾಸದಲ್ಲಿ ಒಮ್ಮೆಯೂ ಆಸ್ಟ್ರೇಲಿಯಾಕ್ಕೆ ಮಣಿದಿಲ್ಲ ಎಂಬ ಹೆಗ್ಗಳಿಕೆ ಭಾರತದ್ದಾಗಿದೆ.