ಕೇಂದ್ರ ಬಜೆಟ್ ನಲ್ಲಿ ಕ್ರಿಪ್ಟೊ ಸೇರಿದಂತೆ ವರ್ಚುವಲ್ ಆಸ್ತಿಗಳ ವಹಿವಾಟುಗಳಿಂದ ರಚಿಸುವ ಆದಾಯಕ್ಕೆ ಶೇ.30 ರಷ್ಟು ತೆರಿಗೆಯನ್ನು ಘೋಷಿಸಿರುವ ಬೆನ್ನಲ್ಲೇ, ಈ ಬಗ್ಗೆ ಮತ್ತಷ್ಟು ವಿವರಗಳನ್ನು ಹಣಕಾಸು ಮತ್ತು ಕಂದಾಯ ಇಲಾಖೆಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಅವರು ಮುಂದಿನ ವರ್ಷದಿಂದ ಆದಾಯ ತೆರಿಗೆ ರಿಟರ್ನ್ ಅರ್ಜಿಯಲ್ಲಿ ಕ್ರಿಪ್ಟೊ ವಹಿವಾಟಿನಿಂದ ದೊರೆಯುವ ಆದಾಯವನ್ನು ಉಲ್ಲೇಖಿಸಲು ಪ್ರತ್ಯೇಕ ಕಾಲಂ ನನ್ನು ವ್ಯವಸ್ಥೆಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
2022ರ ಏಪ್ರಿಲ್ 1 ರಿಂದ ಕ್ರಿಪ್ಟೊ ವಹಿವಾಟಿನಿಂದ ದೊರೆಯುವ ಆದಾಯದ ಮೇಲೆ ಶೇ.30 ರಷ್ಟು ತೆರಿಗೆ ಅನ್ವಯವಾಗಲಿದೆ. ಕುದುರೆ ಜೂಜು, ಬೆಟ್ಟಿಂಗ್ ಮೂಲಕ ದೊರೆಯುವ ಆದಾಯಕ್ಕೆ ಸಮನಾಗಿ ಕ್ರಿಪ್ಟೊ ಆದಾಯವನ್ನು ಪರಿಗಣಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕ್ರಿಪ್ಟೊ ವಹಿವಾಟಿನಿಂದ ಗಳಿಸುವ 50ಲಕ್ಷ ರೂ. ಗಿಂತ ಅಧಿಕ ಆದಾಯಕ್ಕೆ ತೆರಿಗೆ ಜೊತೆಗೆ ಶೇ.15 ರಷ್ಟು ಸೆಸ್ ಮತ್ತು ಸರ್ಚಾರ್ಜ್ ಸಹ ಅನ್ವಯವಾಗಲಿದೆ ಎಂದು ತರುಣ್ ಬಜಾಜ್ ತಿಳಿಸಿದ್ದಾರೆ.
ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು “ಆರ್ ಬಿ ಐ ಹೊರತರಲಿರುವ ಡಿಜಿಟಲ್ ರೂಪಾಯಿ (ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ- ಸಿಬಿಡಿಸಿ) ಈಗಿರುವ ನಗದು ಕರೆನ್ಸಿಯ ಡಿಜಿಟಲ್ ರೂಪವಷ್ಟೇ. ಡಿಜಿಟಲ್ ಕರೆನ್ಸಿಯನ್ನು ನಗದಿನ ಜೊತೆ ಚಾಲನೆಯಿಂದ ಡಿಜಿಟಲ್ ಆರ್ಥಿಕತೆ ಬಲಗೊಳ್ಳಲಿದೆ. ವಹಿವಾಟಿನ ಭದ್ರತೆ ಹೆಚ್ಚಲಿದೆ” ಎಂದು ಹೇಳಿದ್ದಾರೆ.