ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗ್ರಾಮೀಣ ಪ್ರದೇಶದ ಇ-ಸ್ವತ್ತು ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿವೇಶನದಲ್ಲಿ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಶಿರಸಿ ತಾಲೂಕಿನ ಮಂಜುಗುಣಿ ಗ್ರಾಮ ಪಂಚಾಯಿತಿಯಲ್ಲಿ ನಾನಾ ಕಾಮಗಾರಿಗಳಿಗೆ ಅವರು ಚಾಲನೆ ನೀಡಿದರು. ಈ ವೇಳೆ ಇ-ಸ್ವತ್ತು ಸಮಸ್ಯೆ ಪರಿಹಾರಕ್ಕೆ ರಚಿತವಾದ ಸಂಪುಟ ಉಪ ಸಮಿತಿ ವರದಿ ನೀಡುವಂತೆ ತಿಳಿಸಲಾಗುವುದು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದರು.
“ಸಣ್ಣ ವಿಷಯಗಳಿಗೂ ಸ್ಥಳೀಯ ಅಧಿಕಾರಿಗಳು ಮಂತ್ರಿಗಳವರೆಗೂ ಕಳುಹಿಸುವ ವ್ಯವಸ್ಥೆಯಿದೆ. ಸ್ಥಳೀಯವಾಗಿ ಬಗೆಹರಿಸಲು ಅವಕಾಶಗಳಿದ್ದರೂ ಮಾಡುವುದಿಲ್ಲ” ಎಂದು ಕಾಗೇರಿ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮಲೆನಾಡು ಭಾಗದಲ್ಲಿ ರಸ್ತೆ ನಿರ್ವಹಣ ಸಮಸ್ಯೆಯಿಂದಾಗಿ ಕಾಂಕ್ರಿಟ್ ರಸ್ತೆಗೆ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ. ಇದರ ವೆಚ್ಚ ಹೆಚ್ಚಾದರೂ ಆದ್ಯತೆ ಮೇರೆಗೆ ನಿರ್ಮಿಸುತ್ತೇವೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದ್ದಾರೆ.