ನಗರ ನೀರು ಸರಬರಾಜು ಮಂಡಳಿ 2021-22ನೇ ಸಾಲಿನ ನೀರಿನ ಕಂದಾಯವನ್ನು ಅವೈಜ್ಞಾನಿಕವಾಗಿ ಏರಿಕೆ ಮಾಡಿದ್ದನ್ನು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಅವರು ವಿರೋಧಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಪ್ರದೇಶವಾರು ಕೆಲವು ವಾರ್ಡ್ ಗಳಿಗೆ 4ರಿಂದ 8 ಸಾವಿರದವರೆಗೆ ಕಂದಾಯ ದರ ಏರಿಸಲಾಗಿದೆ.
ಸಾರ್ವಜನಿಕರಿಗೆ ಅವಶ್ಯಕವಾಗಿ ಬೇಕಾಗಿರುವ ನೀರಿನ ಮೇಲೆ ಈ ರೀತಿ ಕಂದಾಯವನ್ನು ಹೆಚ್ಚಿಸಿರುವುದು ಜನಸಾಮಾನ್ಯರ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ತಿಳಿಸಿದರು.
ಕೊರೊನಾದಿಂದ ಜನ ಸಂಕಷ್ಟದಲ್ಲಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ಕಂದಾಯ ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ನೀರಿನ ಕಂದಾಯವನ್ನು ಇಳಿಸಿ ಗ್ರಾಹಕರ ಮೇಲೆ ಹಾಕುವ ಭಾರವನ್ನು ಕಡಿಮೆ ಮಾಡಬೇಕು. ತಪ್ಪಿದರೆ ಸಾರ್ವಜನಿಕವಾಗಿ ಪ್ರತಿರೋಧಕ್ಕೆ ಗುರಿಯಾಗುವ ಸಾಧ್ಯತೆಯಿದೆ.
ಶಿವಮೊಗ್ಗ ನಗರದ ಪ್ರತಿ ವಾರ್ಡಿನ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳ ಸಭೆ ಕರೆದು ದರ ಪರಿಷ್ಕರಣೆ ಮಾಡುವುದು ಸೂಕ್ತ ಎಂದರು