ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯದಲ್ಲಿ 600ಕ್ಕೂ ಹೆಚ್ಚು ಕಲ್ಯಾಣಿಗಳನ್ನು ಪುನರುಜ್ಜೀವನಗೊಳಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪನವರು ತಿಳಿಸಿದ್ದಾರೆ.
ಶಿವಮೊಗ್ಗ ತಾಲೂಕು ಹೊಳಲೂರು ಅಂಬೇಡ್ಕರ್ ಭವನದಲ್ಲಿ ಉದ್ಯೋಗ ಖಾತ್ರಿ ಯೋಜನೆ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ನರೇಗಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ನರೇಗಾ ಯೋಜನೆ ಕೇವಲ ಕೂಲಿಗಾಗಿ ಕೆಲಸ ಮಾಡುವಂತದ್ದಲ್ಲ. ಗ್ರಾಮೀಣ ಪ್ರದೇಶದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಸೃಜಿಸುವುದರೊಂದಿಗೆ ವೈಯಕ್ತಿಕ ಸೌಲಭ್ಯಗಳನ್ನು ಸಹ ಪಡೆಯುವ ಸದಾವಕಾಶವನ್ನು ಒದಗಿಸಿದೆ. ಯೋಜನೆಯಡಿ ರಾಜ್ಯದಲ್ಲಿ ಗ್ರಾಮಗಳನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಸಣ್ಣ ರೈತರು ತಮ್ಮ ಕೃಷಿ ಚಟುವಟಿಕೆ ಸಾಮರ್ಥ್ಯವನ್ನು ವೃದ್ಧಿಸಿ ಅಧಿಕ ಆದಾಯ ಗಳಿಸಲು ಸಹ ಸಹಕಾರಿಯಾಗಿದೆ ಎಂದರು.
ಕಳೆದ ಎರಡು ವರ್ಷಗಳಲ್ಲಿ ಪ್ರತಿಗ್ರಾಮದಲ್ಲಿ ಕನಿಷ್ಠ ಒಂದು ಕೆರೆ ಅಥವಾ ಕಟ್ಟೆಯ ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗಿದೆ.
ಇದರಿಂದಾಗಿ ಜಲಧಾರೆ ಯೋಜನೆಯಡಿ ನಮ್ಮ ರಾಜ್ಯ ದೇಶಕ್ಕೆ ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ತಿಳಿಸಿದರು.