ಶಿವಮೊಗ್ಗ ನಗರದ ಪ್ರತಿಮನೆಗೂ ಇನ್ನೊಂದು ವರ್ಷದಲ್ಲಿ ನಿರಂತರವಾಗಿ 24×7 ಕುಡಿಯುವ ನೀರು ಸಿಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪನವರು ತಿಳಿಸಿದ್ದಾರೆ.
ಶಿವಮೊಗ್ಗದ ಗುಡ್ಡೇಕಲ್ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಗರಪಾಲಿಕೆ ವ್ಯಾಪ್ತಿಯ ಹೊರವಲಯದಲ್ಲಿ ಬರುವ ಪ್ರದೇಶಗಳಿಗೆ ನಿರಂತರ ಒತ್ತಡ ಯುಕ್ತ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವ ರೂ.96.50 ಕೋಟಿ ಅಂದಾಜು ವೆಚ್ಚದ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
ನಗರದ ಹೊರವಲಯದಲ್ಲಿರುವ ವಿರುಪಿನಕೊಪ್ಪ ಮಂಡಿಯಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರು ರೂ.4 ಕೋಟಿಯನ್ನು ಘೋಷಿಸಿದ್ದಾರೆ.
ಇನ್ನೊಂದು ವರ್ಷದೊಳಗೆ ನಗರ ಹೊರವಲಯಕ್ಕೆ ನೀರು ಕಲ್ಪಿಸುವ ಕಾಮಗಾರಿ ಪೂರ್ಣಗೊಳ್ಳಲೇಬೇಕು. ಈ ನಿಟ್ಟಿನಲ್ಲಿ ಕೆಲಸಗಳು ಚುರುಕಾಗಬೇಕು ಎಂದು ಸೂಚನೆ ನೀಡಿದರು.
ಈ ಯೋಜನೆಯಿಂದ ನಗರದ ಹೊರವಲಯದ ಪ್ರದೇಶಗಳಿಗೆ 2035ನೇ ಸಾಲಿನವರೆಗೆ ನಿರಂತರವಾಗಿ ಕುಡಿಯುವ ನೀರು ದೊರಕಲಿದೆ. ವಿರುಪಿಕೊಪ್ಪದ ಕುಡಿಯುವ ನೀರಿನ ಯೋಜನೆಗೆ ಯೋಜನೆಯಡಿಯೇ ವ್ಯವಸ್ಥೆ ಮಾಡಲಾಗುವುದು. ಗುಣಮಟ್ಟದ ಕೆಲಸ ಆಗಬೇಕು. ಪ್ರತಿ ಮನೆಗೆ ಒಂದು ವರ್ಷದಲ್ಲಿ ನೀರು ಸರಬರಾಜಾಗಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ , ಪಾಲಿಕೆ ಸದಸ್ಯೆ ಸುವರ್ಣ ಶಂಕರ್, ಯಮುನಾ ರಂಗೇಗೌಡ, ಎಚ್.ಸಿ. ಯೋಗೀಶ್ ಮತ್ತು ಇನ್ನಿತರರು ಉಪಸ್ಥಿತರಿದ್ದರು.
ಒಂದು ವರ್ಷದಲ್ಲಿ ಶಿವಮೊಗ್ಗದ ಪ್ರತಿ ಮನೆಗೆ ಕುಡಿಯುವ ನೀರು-ಸಚಿವ ಈಶ್ವರಪ್ಪ
Date: