ಅಪ್ರತಿಮಸ್ವಾತಂತ್ರ್ಯ ಹೋರಾಟಗಾರ ಧೋಂಡಿಯಾವಾಘ್ ಅಶ್ವದಳದ ಸಿಪಾಯಿಯಾಗಿ
ಕೆಲಸಕ್ಕೆ ಸೇರಿ ಎತ್ತರಕ್ಕೆ ಬೆಳೆದು ಬ್ರಿಟೀಷರ ವಿರುದ್ಧ ಪೊಲೀಸ್ ಪಶುದ್ಧ ರಣಕಹಳೆ ಮೊಳಗಿಸಿದ್ದು ಎಲ್ಲರಿಗೂ ದಿವ್ಯ ಪ್ರೇರಣೆ ಎಂದು ಖ್ಯಾತ ಸಾಹಿತಿ ಹಾಗೂ ಧೋಂಡಿಯಾವಾಘ್ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಪದ್ಮಶ್ರೀ ಪುರಸ್ಕೃತ ಡಾ. ದೊಡ್ಡರಂಗೇಗೌಡ ತಿಳಿಸಿದರು.
ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಧೋಂಡಿಯಾವಾಘ್ ಜಾಗೃತಿ ಸಮಿತಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ನಿಮಿತ್ತ ಏರ್ಪಡಿಸಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಇವತ್ತು ಯಾವುದೇ ಸಂಶೋಧನೆಗಳನ್ನು ಮಾಡಿದರೂ ಸಂಶೋಧನೆಗಳು ಮಸುಕಾಗಿರುತ್ತವೆ. ತೆರೆಗೆ ಸರಿದಿರುತ್ತವೆ. ಅದರ ಬೆಳಕನ್ನು ಚೆಲ್ಲಿ ಸತ್ಯದ ಅನ್ವೇಷಣೆಗೆ ತೊಡಗಿಸಿಕೊಂಡು ವಾಸ್ತವ ದರ್ಶನ ಮಾಡಿದಾಗ ಸಂಶೋಧನೆಗಳು ಹೊರ ಬರುತ್ತವೆ.ಈ ನಿಟ್ಟಿನಲ್ಲಿ ಇತಿಹಾಸಕಾರರು ಆಸಕ್ತಿ ತೋರದೆ ಪೂರ್ವಾಗ್ರಪೀಡಿತರಾಗಿ ಧೋಂಡಿಯಾವಾಘ್ ಅವರನ್ನು ಸ್ಮರಿಸದೇ ಇರುವ ಕುಟಿಲ ತಂತ್ರಕ್ಕೆ ಒಳಗಾದಂತೆ ಕಾಣುತ್ತಿದ್ದಾರೆ ಎಂದರು.

ಆದರ್ಶದ ಹಾದಿಯಲ್ಲಿ ಯುವಜನರನ್ನು ಕರೆದುಕೊಂಡು ಹೋಗಬೇಕಾಗಿದೆ.ಈ ನಿಟ್ಟಿನಲ್ಲಿ ಯುವಕರಿಂದ ಜಾಗೃತಿ ಆಗಬೇಕು. ಭಾರತೀಯರಿಂದ ಸ್ವಂತದ್ದು ಯಾವುದೂ ಇಲ್ಲ.ಪಾಶ್ಚಿಮಾತ್ಯ ದೇಶಗಳ ಕಡೆಗೆ ಅಭಿಮುಖವಾಗುತ್ತಿದ್ದೇವೆ ಎಂದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಸಂಪೂರ್ಣವಾಗಿ ಹಾದಿ ತಪ್ಪುತ್ತಿದ್ದಾರೆ.ಮೊಬೈಲ್‌ಗೆ ಶರಣಾಗಿ ಕಲಿಯಬಾರದ್ದನ್ನು ಕಲಿತು ದುರ್ನಡತೆಯ ದಿನಗಳಲ್ಲಿ ನಾವು ಇದ್ದೇವೆ. ಭಾರತೀಯರ ಪುನರುತ್ಥಾನ ಚಾರಿತ್ರ್ಯವಾಗದೇ ಹೋದರೆ ಜಗತ್ತಿಗೆ ಭಾರತ ಮಾದರಿಯಾಗುವುದು ಹೇಗೆ, ಈ ನಿಟ್ಟಿನಲ್ಲಿ ಕೈಂಕರ‍್ಯಗಳನ್ನು ಮಾಡುವ ಮೂಲಕ ಎಲ್ಲರೂ ಒಳ್ಳೆಯ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದರು.
ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ಧೋಂಡಿಯಾವಾಘ್. ಈತ ಎಲ್ಲೂ ಕೂಡ ಶರಣಾಗತನಾಗಿಲ್ಲ. ತನ್ನ ವೀರಪರಾಕ್ರಮಗಳನ್ನು ಪಣಕ್ಕಿಟ್ಟು ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ ಶೌರ‍್ಯ ಸಾಹಸಿ. ೫ ವರ್ಷಗಳ ಕಾಲ ಸೆರೆಮನೆವಾಸ ಅನುಭವಿಸಿ ತನ್ನನ್ನು ತಾನು ತೊಡಗಿಸಿಕೊಂಡ ಐತಿಹಾಸಿಕ ಮಾಹಿತಿಗಳನ್ನು ಜಾಗೃತಿ ಸಮಿತಿ ಕ್ರೋಢೀಕರಣ ಮಾಡಿ ಕರಾರುವಕ್ಕಾಗಿ ಎಲ್ಲ ಕಡೆ ತಿಳಿಸಬೇಕು. ಈ ನಿಟ್ಟಿನಲ್ಲಿ ಜಾಗೃತಿ ಸಮಿತಿ ಧೀಕ್ಷೆ ಪಡೆದು ಯುವಜನರ ಪಡೆ ಕಟ್ಟಬೇಕು ಎಂದು ಸಲಹೆ ನೀಡಿದರು.
ಶಾಲಾ ಕಾಲೇಜುಗಳಲ್ಲಿ ಧೋಂಡಿಯಾವಾಘ್ ಚರಿತ್ರೆಯನ್ನು ತಿಳಿಸಬೇಕು. ಇಂತಹ ಸಮಾರಂಭಗಳಲ್ಲಿ ಧೋಂಡಿಯಾವಾಘ್ ಇತಿಹಾಸ ಸಾರುವ ಕೆಲಸದ ಜೊತೆಗೆ ಚಾರಿತ್ರ್ಯ ನೀತಿ ಪಾಠ ಹೇಳಿಕೊಡುವ ಸಾಹಿತ್ಯದ ಕೆಲಸ ಆಗಬೇಕು ಎಂದರು.
ಶ್ರೀರಂಗಪಟ್ಟಣದ ರಹಸ್ಯ ನೆಲಮಾಳಿಗೆಯಲ್ಲಿ ಐದು ವರ್ಷಗಳ ಕಾಲ ಬಂಧಿತನಾಗಿ ಸೆರೆಮನೆವಾಸ ಮಾಡಿರುವ ಆ ಸೆರೆಮನೆಗೆ ಧೋಂಡಿಯಾವಾಘ್ ಸೆರೆಮನೆ ಎಂದು ಹೆಸರಿಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ನಿವೃತ್ತ ತಹಸೀಲ್ದಾರ್ ಹಾಗೂ ಜಾಗೃತ ಸಮಿತಿ ಸಂಚಾಲಕ ಕ.ವೆಂ. ನಾಗರಾಜು ಮಾತನಾಡಿ, ೧೮೫೭ರ ಪ್ರಥಮ ಸ್ವಾತಂತ್ರ್ಯ ಹೋರಾಟಕ್ಕೆ ೬೦ ವರ್ಷಗಳ ಮೊದಲೇ ಕರುನಾಡಿನಲ್ಲಿ ಕ್ರಾಂತಿಯ ಕಿಡಿ ಹಚ್ಚಿದವರು ಧೋಂಡಿಯಾ. ಚನ್ನಗಿರಿಯ ಸಾಮಾನ್ಯ ಮರಾಠ ಕುಟುಂಬದಲ್ಲಿ ೧೭೪೫ರ ಸುಮಾರಿನಲ್ಲಿ ಜನಿಸಿದ ದೋಂಡಿಯಾನ ಬಂಡಾಯ ಒಂದು ಸಂಸ್ಥಾನಕ್ಕೆ, ಸೀಮೆಗೆ ಅಥವಾ ಸಮುದಾಯಕ್ಕೆ ಸೀಮಿತವಾಗಿರಲಿಲ್ಲ. ರಾಷ್ಟ್ರೀಯ ಜನನಾಯಕನಾಗಿ, ಸಂಘಟಕನಾಗಿ ಬೆಳೆದು ಬಂದ ರೀತಿ ಅನನ್ಯ ಎಂದು ಹೇಳಿದರು.

ಈ ವೀರನ ಹೆಸರನ್ನೇ ನಾಡಿನ ಬಹುತೇಕರು ಕೇಳಿಲ್ಲ. ಇದಕ್ಕೆ ಇಂದಿನ ಶಿಕ್ಷಣ ಪದ್ಧತಿ. ಆಡಳಿತದಲ್ಲಿರುವವವರ ನಿರ್ಲಕ್ಷ್ಯ ಇತಿಹಾಸಕಾರರು ಅವನ ಸಾಮಾನ್ಯ ಹಿನ್ನಲೆ, ಇತ್ಯಾದಿಗಳನ್ನು ಕಾರಣವಾಗಿ ಕೊಡಬಹುದು. ಇತಿಹಾಸದಲ್ಲಿ ಮುಚ್ಚಿಹಾಕಲ್ಪಟ್ಟ ಅವನಂತಹ ಸಾಮಾನ್ಯ ವೀರರ ಕಥೆಗಳನ್ನು ಅಧ್ಯಯನ ಸಂಶೋಧನೆಯಿಂದ ಹೊರತಂದು ಮಕ್ಕಳಿಗೆ ಹೇಳಿಕೊಡಬೇಕಾಗಿದೆ ಎಂದು ಸಲಹೆ ನೀಡಿದರು.
ಮೈಸೂರು ವಿ.ವಿ. ಸಿಂಡಿಕೇಟ್ ಸದಸ್ಯ ಹಾಗೂ ಧೋಂಡಿಯಾವಾಘ್ ಸಮಿತಿಯ ಪ್ರಧಾನ ಕಾರ‍್ಯದರ್ಶಿ ಈ.ಸಿ. ನಿಂಗರಾಜ್ ಗೌಡ ಮಾತನಾಡಿ, ೧೮ನೇ ಶತಮಾನದ ಅಂತ್ಯದ ವೇಳೆ ಆಗಿನ ಮೈಸೂರು ಪ್ರಾಂತ್ಯ ಮತ್ತು ಸುತ್ತಮುತ್ತ ಧೋಂಡಿಯಾವಾಘ್ ಅಶ್ವದಳದ ನಾಯಕನಾಗಿ ಕೆಲವು ಪ್ರದಶಗಳ ಒಡೆಯನಾಗಿ ಬ್ರಿಟೀಷರ ವಿರುದ್ಧ ಮೈಸೂರು ಪ್ರಾಂತ್ಯದಲ್ಲಿ ಹೋರಾಟ ಮಾಡಿದ ಒಬ್ಬ ಸಾಹಸಿ ಎಂದು ಹೇಳಿದರು. ಧೋಂಡಿಯಾವಾಘ್ ಅವರ ವಿಚಾರಗಳನ್ನು ಪಠ್ಯ ಪುಸ್ತಕದಲ್ಲಿ ತಿಳಿಸುವ ಕೆಲಸ ಆಗಬೇಕು.ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅವರ ವಿಚಾರಧಾರೆಗಳನ್ನು ತಿಳಿಸುವ ಕೆಲಸ ಮಾಡಿಲ್ಲ. ಈ ನಿಟ್ಟಿನಲ್ಲಿ ಅವರ ವಿಚಾರಗಳನ್ನು ರಾಜ್ಯ ಮತ್ತು ವಿಶ್ವ, ದೇಶಕ್ಕೆ ತಲುಪಿಸುವ ಕೆಲಸ ಆಗಬೇಕು. ಕೆಳದಿಯ ಸಂಸ್ಥಾನದಲ್ಲಿ ಕರಣಿಕರಿಗೆ ಸಹಾಯಕನಾಗಿ ವೃತ್ತಿ ಆರಂಭಿಸಿದ ಧೋಂಡಿಯಾವಾಘ್, ಮೈಸೂರಿನ ಹೈದರಾಲಿ ಸೈನ್ಯದಲ್ಲಿ ಸೈನಿಕನಾಗಿ ಸೇರಿದ ಮೂರನೇ ಮೈಸೂರು ಯುದ್ಧದ ನಂತರ ಈ ಸೈನ್ಯವನ್ನು ತೊರೆದು ಸ್ವತಂತ್ರವಾಗಿ ಸೈನ್ಯ ಕಟ್ಟಿ ಹರಿಹರ, ಸವಣೂರು ಮುಂತಾದ ಊರುಗಳನ್ನು ಗೆದ್ದು ತನ್ನ ಪ್ರಭಾವವನ್ನು ವಿಸ್ತರಿಸಲು ಪ್ರಯತ್ನಿಸಿದ. ಮರಾಠರೊಂದಿಗೆ ಸೋತ ಕಾರಣ ಮತ್ತೆ ಟಿಪ್ಪುವನ್ನು ಆಶ್ರಯಿಸಲು ನಿಶ್ಚಯಿಸಿದ. ಮತಾಂತರ ಹೊಂದಲು ಹೇಳಿ ಅವನನ್ನು ಎದುರಿಸಿದ್ದರು.ಆದರೆ ಮತಾಂತರ ಹೊಂದದ ಕಾರಣ ಟಿಪ್ಪು ಧೋಂಡಿಯಾವಾಘ್‌ನನ್ನು ಐದು ವರ್ಷಗಳ ಕಾಲ ಬಂಧನದಲ್ಲಿರಿಸಿದ್ದ ಎಂದು ವಿವರಿಸಿದರು.
ನಾಲ್ಕನೇ ಮೈಸೂರು ಯುದ್ಧದಲ್ಲಿ ಟಿಪ್ಪು ಸೋತ ನಂತರ ಶ್ರೀರಂಗಪಟ್ಟಣದಿಂದ ತಪ್ಪಿಸಿಕೊಂಡು ಮತ್ತೆ ತನ್ನ ಪ್ರಭುತ್ವವನ್ನು ಸ್ಥಾಪಿಸಲು ಪ್ರಯತ್ನಿಸಿದ. ಕಡೆಗೆ ಬ್ರಿಟೀಷರೊಂದಿಗೆ ಹೋರಾಟ ಮಾಡಿ ವೀರ ಮರಣವನ್ನಪ್ಪಿದ ಎಂದು ಹೇಳಿದರು.
ಈ ಸಮಾರಂಭ ಉದ್ಘಾಟಿಸಿ ಮಾತನಾಡಿದ ಶ್ರೀರಂಗಪಟ್ಟಣದ ಶಾಶ್ವತಿ ಕ್ರಿಯಾ ಸಮಿತಿ ಅಧ್ಯಕ್ಷ ಡಾ. ಬಾನುಪ್ರಕಾಶ್‌ಶರ್ಮಾ ಮಾತನಾಡಿ, ಧೋಂಡಿಯಾವಾಘ್ ಶ್ರೀರಂಗಪಟ್ಟಘಿಣದಲ್ಲೇ ಸೆರೆವಾಸ ಅನುಭವಿಸಿರುವುದು ಶ್ರೀರಂಗಪಟ್ಟಣದ ಜನರಿಗೇ ತಿಳಿದಿಲ್ಲ.ಇವತ್ತು ಶ್ರೀರಂಗಪಟ್ಟಣದಲ್ಲೇ ವಾಸವಿದ್ದರೂ ಆ ಹೆಸರನ್ನು ಇನ್ನೂ ತಿಳಿದುಕೊಳ್ಳಲಾಗಿಲ್ಲ.ಈ ನಿಟ್ಟಿನಲ್ಲಿ ಮಕ್ಕಳಿಗೆ ಚರಿತ್ರೆಯಲ್ಲಿ ಧೋಂಡಿಯಾವಾಘ್ ವಿಚಾರಗಳನ್ನು ತಿಳಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಚನ್ನಗಿರಿಯಿಂದ ಬಂದು ಇಲ್ಲಿ ಬ್ರಿಟೀಷರೊಂದಿಗೆ ಹೋರಾಟ ಮಾಡಿದ ಧೋಂಡಿಯಾವಾಘ್ ಹೆಸರನ್ನು ಶಾಲೆಗಳಲ್ಲಿ ವಿಚಾರ ಸಂಕಿರಣ, ರಸಪ್ರಶ್ನೆ ಸೇರಿದಂತೆ ವಿವಿಧ ಕಾರ‍್ಯಕ್ರಮಗಳನ್ನು ರೂಪಿಸಿ ಅವರ ಹೆಸರು ಚಿರಸ್ತಾಯಿಯಾಗಿರುವಂತೆ ಮಾಡಬೇಕು.ಪಟ್ಟಣದಲ್ಲಿ ತಂಗುದಾಣವನ್ನು ನಿರ್ಮಿಸುತ್ತಿದ್ದು, ಅದಕ್ಕೆ ಧೋಂಡಿಯಾವಾಘ್ ಅವರ ಹೆಸರಿಡಲು ನಾನೇ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ಅಧ್ಯಯನದ ನಿರ್ದೇಶಕ ಪ್ರೊ.ಎಂ.ಜಿ.ಮಂಜುನಾಥ್, ಅಖಿಲ ಭಾರತ ಸಾಹಿತ್ಯ ಪರಿಷತ್ ಅಧ್ಯಕ್ಷ ಮತ್ತು ಶಿವಮೊಗ್ಗ ಕೆ-ಲೈವ್ ಮೀಡಿಯಾ ಪ್ರಧಾನ ಸಂಪಾದಕ ಡಾ. ಸುಧೀಂದ್ರ ಅವರು ಧೋಂಡಿಯಾವಾಘ್ ಅದ್ಭುತ ಹೋರಾಟಗಾರ ಮತ್ತು ಜನನಾಯಕ ಕುರಿತು ವಿಚಾರ ಮಂಡಿಸಿದರು.
ಸಾಮಾಜಿಕ ಕಾರ‍್ಯಕರ್ತ ಅಣ್ಣೋಜಿರಾವ್ ಪವಾರ್ ಅವರು ಧೋಂಡಿಯಾವಾಘ್‌ನ ಬಲವಂತದ ಮತಾಂತರ ಮತ್ತು ಸೆರೆವಾಸ ಕುರಿತು ವಿಷಯ ಮಂಡಿಸಿದರೆ, ಶಿವಮೊಗ್ಗದ ಸಾಮಾಜಿಕ ಕಾರ‍್ಯಕರ್ತೆ ಶ್ರೀರಂಜನಿ ದತ್ರಾತ್ರಿ ಶ್ರೀರಂಗಪಟ್ಟಣದ ನೆಲಮಾಳಿಗೆ ಸೆರೆಮನೆಯ ಕಥೆ ಕುರಿತು ವಿಚಾರ ಮಂಡಿಸಿದರು.
ಸಂಜೆ ನಡೆದ ಸಂಭ್ರಮದಲ್ಲಿ
ವಿಧಾನ ಪರಿಷತ್ ಮಾಜಿ ಸದಸ್ಯೆ ಡಾ.ಎಸ್.ಆರ್. ಲೀಲಾ ಅವರು ಸಮಾರೋಪ ನುಡಿಗಳನ್ನಾಡಿದರು.
ಶಿಕ್ಷಣ ಇಲಾಖೆಯನಿವೃತ್ತ ಜಂಟಿ ನಿರ್ದೇಶಕ ಡಾ.ತಿರುಮಲರಾವ್, ವಿಜ್ಞಾನ ಲೇಖಕ ಸಾತನೂರು ದೇವರಾಜ್ ಸೇರಿದಂತೆ ಹಲವರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಇಡೀ ಕಾರ್ಯಕ್ರಮವನ್ನು
ಅತ್ಯಂತ ಕಡಿಮೆ ಅವಧಿಯಲ್ಲಿ ವ್ಯವಸ್ಥೆಮಾಡಿ ಅಂದಗಾಣಿಸಿದ ಸಂಘಟಕ,ಮೈಸೂರುವಿವಿ ಸೆನೆಟ್ ಸದಸ್ಯ ಡಾ.ಇ.ಸಿ.ನಿಂಗರಾಜೇಗೌಡರು ಅಭಿನಂದನಾರ್ಹರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.