ಕೊರೋನಾ ರೂಪಾಂತರ ತಳಿ ಓಮಿಕ್ರಾನ್ ನ ಮತ್ತೊಂದು ಪ್ರಕರಣ ರಾಜ್ಯದಲ್ಲಿ ಪತ್ತೆಯಾಗಿದೆ. ಒಟ್ಟಾರೆ ಪ್ರಕರಣಗಳು ಮೂರಕ್ಕೆ ಏರಿಕೆಯಾಗಿದೆ.
ದಕ್ಷಿಣ ಆಫ್ರಿಕಾದಿಂದ ಕರ್ನಾಟಕಕ್ಕೆ ಬಂದಿದ್ದ 34 ವರ್ಷದ ವ್ಯಕ್ತಿಗೆ ಓಮಿಕ್ರಾನ್ ಸೋಂಕು ದೃಡಪಟ್ಟಿದೆ. ಪ್ರಸ್ತುತ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈತನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಐದು ಜನ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 15 ಮಂದಿಯನ್ನು ಪತ್ತೆ ಮಾಡಲಾಗಿದೆ. ಎಲ್ಲಾ ಸಂಪರ್ಕಿತ ರಿಗೆ ಪರೀಕ್ಷೆ ನಡೆಸಿ, ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಸಾಮಾಜಿಕ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ನಂತರ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ, ವ್ಯಕ್ತಿಯನ್ನು ಬಿಬಿಎಂಪಿಯು ಕ್ವಾರಂಟೈನ್ ಒಳಪಡಿಸಿತ್ತು. ಆತನಲ್ಲಿ ಓಮಿಕ್ರಾನ್ ಸೋಂಕಿನ ಲಕ್ಷಣಗಳು ಕಂಡು ಬಂದಿವೆ. ಹೀಗಾಗಿ ಮತ್ತೆ ಕೋವಿಡ್ ಪರೀಕ್ಷೆ ನಡೆಸಿದ ನಂತರ ಕೊರೋನಾ ಪಾಸಿಟಿವ್ ವರದಿ ಬಂದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾದರಿಯನ್ನು ಜಿನೋಮ್ ಸಿಕ್ವೆನ್ಸಿಂಗ್ ಗೆ ಕಳುಹಿಸಲಾಗಿತ್ತು. ಇದರ ವರದಿಯಲ್ಲಿ ಓಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ದೇಶದಲ್ಲೇ ಮೊದಲ ಬಾರಿಗೆ ಓಮಿಕ್ರಾನ್ ಸೋಂಕಿತ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದ್ದವು. ದಿನದಿಂದ ದಿನಕ್ಕೆ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲರಲ್ಲೂ ಆತಂಕವನ್ನು ಸೃಷ್ಟಿಸಿದೆ. ಕರ್ನಾಟಕದಲ್ಲಿ 3, ಮಹಾರಾಷ್ಟ್ರದಲ್ಲಿ 17, ರಾಜಸ್ಥಾನದಲ್ಲಿ 9, ಗುಜರಾತ್ 3, ಆಂಧ್ರಪ್ರದೇಶ 1, ನವದೆಹಲಿ 2 ಹೀಗೆ ಒಟ್ಟು ದೇಶದಲ್ಲಿ 36 ಪ್ರಕರಣಗಳು ಧೃಡಪಟ್ಟಿದೆ ಎಂದು ವರದಿಯಾಗಿದೆ.