ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಬುಧವಾರ ಮಧ್ಯಾಹ್ನ ಭಾರತೀಯ ವಾಯುಪಡೆಯ ಎಂಐ- 17ವಿ5 ಹೆಲಿಕ್ಯಾಪ್ಟರ್ ಪತನಗೊಂಡಿತು. ಈ ದುರಂತದಲ್ಲಿ, ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ (63), ಅವರ ಪತ್ನಿ ಮಧುಲಿಕಾ, 7 ಅಧಿಕಾರಿಗಳು ಹಾಗೂ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದಾರೆ.
ರಾವತ್ ಅವರು ವೆಲ್ಲಿಂಗ್ ಟನ್ ನಲ್ಲಿನ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಉಪನ್ಯಾಸ ನೀಡಲು ತೆರಳುತ್ತಿದ್ದರು.
ರಾವತ್, 2019ರಲ್ಲಿ ಭಾರತದ ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಬಿಪಿನ್ ರಾವತ್ ಅವರು, ಈ ಸ್ವರೂಪದ ಅಪಘಾತದಲ್ಲಿ ಮೃತಪಟ್ಟ ಸೇನೆಯ ಮೊದಲ ಅತ್ಯುನ್ನತ ಅಧಿಕಾರಿ.
ವೆಲ್ಲಿಂಗ್ ಟನ್ ನಿಂದ 88 ಕಿ.ಮೀ. ದೂರದಲ್ಲಿರುವ ಸೂಲೂರಿಗೆ ದಂಪತಿಗಳು ದೆಹಲಿಯಿಂದ ವಾಯುಪಡೆಯ ವಿಮಾನದ ಮೂಲಕ ಬುಧವಾರ ಬೆಳಿಗ್ಗೆ ಬಂದಿಳಿದಿದ್ದರು.
ಅಲ್ಲಿಂದ ಹೆಲಿಕ್ಯಾಪ್ಟರ್ ಮೂಲಕ ವೆಲ್ಲಿಂಗ್ ಟನ್ ಗೆ ವಾಯುಪಡೆಯ ಹೆಲಿಕ್ಯಾಪ್ಟರ್ ನಲ್ಲಿ ಹೊರಟಿದ್ದರು. ವೆಲ್ಲಿಂಗ್ ಟನ್ ಹೆಲಿಪ್ಯಾಡ್ ನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದ್ದಾಗ, ಕೂನೂರಿನ ಬಳಿ ಹೆಲಿಕಾಪ್ಟರ್ ಪತನವಾಗಿದೆ.
ಕೂನೂರಿನ ಹೊರವಲಯದಲ್ಲಿದ್ದ ಮನೆಗಳಿಂದ ಕೆಲವೇ ಅಡಿ ದೂರದಲ್ಲಿ ಹೆಲಿಕ್ಯಾಪ್ಟರ್ ನೆಲಕ್ಕೆ ಅಪ್ಪಳಿಸಿದೆ.
ಅವಘಡದಲ್ಲಿ ಬದುಕುಳಿದಿದ್ದ ಇಬ್ಬರನ್ನು ವೆಲ್ಲಿಂಗ್ ಟನ್ ಸೇನಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾವತ್ ಅವರು ಅಸುನೀಗಿದ್ದಾರೆ. ಆರು ವರ್ಷಗಳ ಹಿಂದೆ ಅಂದರೆ 2015ರಲ್ಲಿ ನಾಗಾಲ್ಯಾಂಡ್ ನಲ್ಲಿ ಸಂಭವಿಸಿದ ಚೀತಾ ಹೆಲಿಕ್ಯಾಪ್ಟರ್ ಅಪಘಾತದಿಂದ ಪಾರಾಗಿದ್ದರು.
ಸದಾ ನಗುಮೊಗದ ಸೈನಿಕರಾಗಿದ್ದ ಜನರಲ್ ಬಿಪಿನ್ ರಾವತ್ ಅವರು ದೇಶದಲ್ಲಿ ಉನ್ನತ ರಕ್ಷಣಾ ವಿಭಾಗದಲ್ಲಿ ಸುಧಾರಣೆ ಆರಂಭಿಸಿದ ಸಾಹಸಿ.
ಬಿಪಿನ್ ರಾವತ್ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನ್ಯೂಕ್ಲಿಯರ್ ಕಮಾಂಡ್ ಅಥಾರಿಟಿಯ ಸದಸ್ಯರಾಗಿದ್ದರು.
ರಕ್ಷಣಾ ಸ್ವಾಧೀನ ಸಮಿತಿ, ರಕ್ಷಣಾ ಯೋಜನಾ ಸಮಿತಿ ಸದಸ್ಯರಾಗಿದ್ದರು.
ಅಂತರಾಷ್ಟ್ರೀಯ ಸಹಕಾರ ಯೋಜನೆ ರೂಪಿಸುವುದು, ಮಾನವೀಯ ನೆರವು ನೀಡುವುದು ಇವರ ಕಾರ್ಯವಾಗಿತ್ತು.
ಮೂರೂ ಪಡೆಗಳ ದಕ್ಷತೆ ಹೆಚ್ಚಿಸುವುದು, ಶೋಧ, ಪ್ರತಿದಾಳಿಗೆ ಅಣಿಗೊಳಿಸುವುದು. ದೇಶಿಯವಾಗಿ ಶಸ್ತ್ರಾಸ್ತ್ರ ಉತ್ಪಾದನೆ ಹೆಚ್ಚಿಸಲು ಯೋಜನೆ ಸಿದ್ಧಪಡಿಸುವುದು ಇವರ ಕಾರ್ಯವಾಗಿತ್ತು.
ಸೇನೆಯ ಮೂರು ಪಡೆಗಳಿಗೆ ಅವರು ನೀಡುತ್ತಿದ್ದ ರಕ್ಷಣಾ ಸಲಹೆ ಪ್ರಮುಖವಾಗಿತ್ತು. ಮೂರು ಪಡೆಗಳ ಮಧ್ಯೆ ಸಂವಹನ, ಸಂಪರ್ಕ ಸಾಧಿಸುವುದು ಅವರ ಹೊಣೆಗಾರಿಕೆಯಾಗಿತ್ತು.
ನಿರೀಕ್ಷಿತ ಬಜೆಟ್ ಆಧಾರದ ಮೇಲೆ ಬಂಡವಾಳ ಸ್ವಾಧೀನ ಪ್ರಸ್ತಾವನೆ ಸಿದ್ಧಪಡಿಸುತ್ತಿದ್ದರು.
ಐದು ವರ್ಷದ ರಕ್ಷಣಾ ಬಂಡವಾಳ ಸ್ವಾಧೀನ ಯೋಜನೆ ರೂಪಿಸಿದ್ದರು.
ಗಡಿ ಬಿಕ್ಕಟ್ಟೇ ಉಂಟಾಗಲಿ, ವೈರಿಗಳಿಂದ ದಾಳಿಯೇ ಆಗಲಿ, ಶತ್ರುಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಗಳೇ ಕೈಗೊಳ್ಳಲಿ, ಸೈನಿಕರನ್ನು ಮುನ್ನಡೆಸುವುದೇ ಇರಲಿ…ಅಲ್ಲೆಲ್ಲ ರಾವತ್ ಅವರು ತೋರಿದ ದಿಟ್ಟತನ, ಕೈಗೊಂಡ ಕ್ರಮಗಳು, ವಹಿಸಿದ ನಾಯಕತ್ವದಲ್ಲಿ ದೇಶಪ್ರೇಮ ತುಂಬಿತ್ತು.
ಚಾಕಚಕ್ಯತೆ, ಚಾಣಾಕ್ಷತನಕ್ಕೆ ಹೆಸರಾಗಿದ್ದ ಬಿಪಿನ್ ರಾವತ್ ಅವರು 2016 ಡಿ.31ರಂದು ದೇಶದ ಮೊದಲ ಸೇನಾ ಪಡೆಗಳ ಮುಖ್ಯಸ್ಥರಾಗಿ ಆಯ್ಕೆಯಾದರು. ಸೇನೆಯ ಮೂರೂ ಪಡೆಗಳ ಮಧ್ಯೆ ಸಂಪರ್ಕ, ಸಂವಹನ ಸೇತುವೆಯಾಗಿ ಕಾರ್ಯನಿರ್ವಹಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರವು ಸಿಡಿಎಸ್ ಸ್ಥಾಪಿಸಿತು. ಎರಡು ವರ್ಷದಿಂದ ನೂತನ ಜವಾಬ್ದಾರಿಯನ್ನು ರಾವತ್ ಅವರು ಸಮರ್ಪಕವಾಗಿ ನಿರ್ವಹಿಸುತ್ತಿದ್ದರು.
ಇವರಿಗೆ ಪರಮ ವಿಶಿಷ್ಟ ಸೇವಾ ಮೆಡಲ್, ಉತ್ತಮ ಯುದ್ಧ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ಯುದ್ದ ಸೇವಾ ಮೆಡಲ್ ( ವೈಎಸ್ಎಂ) , ಸೇನಾ ಮೆಡಲ್, ವಿಶಿಷ್ಟ ಸೇವಾ ಮೆಡಲ್ ಗಳು ಸಂದಿವೆ.
ಹೆಲಿಕಾಪ್ಟರ್ ಅಪಘಾತದಲ್ಲಿ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್.ಎಸ್.ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್, ಸ್ಕ್ವಾಡ್ರನ್ ಲೀಡರ್ ಕುಲದೀಪ್, ಜೆಡಬ್ಲ್ಯೂ ಒ ಪ್ರದೀಪ್, ಜೆಡಬ್ಲ್ಯೂ ಒ ದಾಸ್, ನಾಯಕ್ ಗೂರ್ ಸೇವಕ್ ಸಿಂಗ್, ನಾಯಕ್ ಜಿತೇಂದ್ರ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ.ಸಾಯಿ ತೇಜ, ಹವಾಲ್ದಾರ್ ಸತ್ಪಾಲ್ ಅವರು ಮರಣ ಹೊಂದಿದ್ದಾರೆ. ಒಟ್ಟು 14 ಜನರಲ್ಲಿ 13 ಜನ ಮರಣ ಹೊಂದಿದ್ದು, ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಬದುಕುಳಿದಿದ್ದಾರೆ.
ಬಿಪಿನ್ ರಾವತ್ ಸೇರಿದಂತೆ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಎಲ್ಲರಿಗೂ ಹಲವು ಗಣ್ಯರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.
“ರಾವತ್ ನಿಧನ ನನ್ನಲ್ಲಿ ದಿಗ್ಭ್ರಮೆ ಮೂಡಿಸಿದೆ. ಭಾರತವು ತನ್ನ ವೀರಪುತ್ರನೊಬ್ಬನನ್ನು ಕಳೆದುಕೊಂಡಿದೆ. ಅವರಿಗೆ ದೊರೆತ ಪ್ರಶಸ್ತಿಗಳು ಅವರು ನಾಲ್ಕು ದಶಕಗಳಲ್ಲಿ ದೇಶಕ್ಕಾಗಿ ಮಾಡಿರುವ ಸೇವೆಯನ್ನು ತೋರಿಸುತ್ತದೆ” ಎಂದು ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ್ ಅವರು ಸಂತಾಪ ಸೂಚಿಸಿದ್ದಾರೆ.
“ಬಿಪಿನ್ ರಾವತ್ ಅತ್ಯುತ್ತಮ ಯುದ್ಧ ಮತ್ತು ನಿಜವಾದ ದೇಶಭಕ್ತರಾಗಿದ್ದರು. ತಂತ್ರ ಕುಶಲತೆ ಕುರಿತು ರಾವತ್ ಅವರು ಅಸಾಧಾರಣ ಒಳನೋಟ ಮತ್ತು ಮುನ್ನೋಟಗಳನ್ನು ಹೊಂದಿದ್ದರು. ಅವರ ನಿಧನ ನನ್ನನ್ನು ತೀವ್ರವಾಗಿ ಬಾಧಿಸುತ್ತಿದೆ” ಎಂದು ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ.
“ಜನರಲ್ ರಾವತ್ ಅವರು ಅಸಾಧಾರಣ ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ದೇಶಕ್ಕೆ ಸೇವೆ ನೀಡಿದ್ದಾರೆ. ಸೇನಾಪಡೆಗಳ ಮುಖ್ಯಸ್ಥರಾಗಿ ಅವರು ಸೇನಾಪಡೆಗಳನ್ನು ಒಗ್ಗೂಡಿಸುವ ಯೋಜನೆಯನ್ನು ಹೊಂದಿದ್ದರು” ಎಂದು ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಸಂತಾಪ ಸೂಚಿಸಿದ್ದಾರೆ.
ಬಿಪಿನ್ ರಾವತ್ ದೇಶ ಕಂಡ ಅಪ್ರತಿಮ ಯೋಧರಲ್ಲಿ ಒಬ್ಬರು. ನಿಷ್ಠೆಯಿಂದ ತಾಯಿನಾಡಿನ ಸೇವೆ ಮಾಡಿದ್ದಾರೆ. ಅವರ ಕೊಡುಗೆ ಮತ್ತು ಬದ್ಧತೆಯನ್ನು ಪದಗಳಲ್ಲಿ ವರ್ಣಿಸಲಾಗುವುದಿಲ್ಲ. ಅವರ ಮರಣ ತುಂಬಾ ನೋವು ತಂದಿದೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂತಾಪ ಸೂಚಿಸಿದ್ದಾರೆ.
” ಇದು ಹಿಂದೆಂದೂ ಕಂಡಿರದಂಥ ದುರಂತ. ಜನರಲ್ ಬಿಪಿನ್ ರಾವತ್ ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ದುರಂತದಲ್ಲಿ ಮಡಿದ ಇತರರಿಗೂ ನನ್ನ ಸಂತಾಪಗಳು. ಈ ನೋವಿನ ಸಂದರ್ಭದಲ್ಲಿ ದೇಶ ಒಟ್ಟಾಗಿ ನಿಲ್ಲುತ್ತದೆ”ಎಂದು ಕಾಂಗ್ರೆಸ್ ನಾಯಕ ಸಂಸದ ರಾಹುಲ್ ಗಾಂಧಿಯವರು ಸಂತಾಪ ಸೂಚಿಸಿದ್ದಾರೆ.
ಹೆಲಿಕ್ಯಾಪ್ಟರ್ ಅಪಘಾತ ಪ್ರಕರಣದ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಸಂಸತ್ತಿಗೆ ತಿಳಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.