ಶಿವಮೊಗ್ಗದಲ್ಲಿ ವಿಧಾನ ಪರಿಷತ್ ನ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಒಂದು ಕ್ಷೇತ್ರಕ್ಕೆ ಡಿ.10ರಂದು ಮತದಾನ ನಡೆಯಲಿದೆ. ಇದಕ್ಕೆ ಅಗತ್ಯ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ.
ಚುನಾವಣೆ ಕಾರ್ಯಕ್ಕೆ ಸಿಬ್ಬಂದಿ ಹಾಗೂ ವಿಶೇಷ ವಾಹನಗಳನ್ನು ನಿಯೋಜಿಸಲಾಗಿದೆ. ನಗರದ ಎನ್ ಇಎಸ್ ಮೈದಾನದಲ್ಲಿ ಅಣಕು ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ನಡೆಯಲಿದೆ.
ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಚುನಾವಣೆ ನಡೆಯಲಿದೆ. ಒಟ್ಟು 257 ಬೂತ್ ಗಳಿದ್ದು, ಇಲ್ಲಿ ಕಾರ್ಯನಿರ್ವಹಿಸಲು 338 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.ಎಎಸ್ಐ, ಪಿಎಸ್ಐ ನೇತೃತ್ವದಲ್ಲಿ 30 ಸೆಕ್ಟರ್ ಗಳನ್ನು ರಚಿಸಲಾಗಿದೆ.
ಅವರುಗಳ ಮೇಲೆ ಮೇಲುಸ್ತುವಾರಿಗೆ 12 ಮೇಲ್ವಿಚಾರಣೆ ಸೆಕ್ಟರ್ ಗಳಿರಲಿವೆ. ಡಿಎಆರ್ 10,ಕೆಎಸ್ಆರ್ ಪಿ 2 ತುಕ್ಕಡಿಗಳು ನಿಯೋಜನೆ ಮಾಡಲಾಗಿದೆ.
ಸೂಕ್ಷ್ಮ ಪ್ರದೇಶಗಳ ಆಧಾರದ ಮೇಲೆ 70 ಪಾಯಿಂಟ್ ಗಳನ್ನು ಗುರುತಿಸಲಾಗಿದ್ದು, ಇಲ್ಲಿಯೂ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.
ವಿಧಾನಪರಿಷತ್ತಿನ ಚುನಾವಣೆ ಹಿನ್ನೆಲೆ ಜಿಲ್ಲೆಗಿಂತ ಡಿಸೆಂಬರ್ 10ರ ಸಂಜೆ 4 ಗಂಟೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಆದೇಶಿಸಿದ್ದಾರೆ.
ಮತದಾನ ಕೇಂದ್ರದ 1 ಕಿ.ಮೀ. ವ್ಯಾಪ್ತಿಯಲ್ಲಿ ಸಂತೆ ಮತ್ತು ಎಲ್ಲ ತರಹದ ಜಾತ್ರೆ ಹಾಗೂ ಭಾರಿ ಪ್ರಮಾಣದಲ್ಲಿ ಜನ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ನಿಷೇಧಾಜ್ಞೆ ಸರಕಾರಿ ಅಧಿಕಾರಿಗಳಿಗೆ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲ. ಸದುದ್ದೇಶದ ಕಾರ್ಯಗಳಾದ ಶವಸಂಸ್ಕಾರ, ಮದುವೆ, ಧಾರ್ಮಿಕ ಆಚರಣೆ ನಡೆಸಲು ದೇವಸ್ಥಾನ, ಚರ್ಚ್, ಮಸೀದಿಗಳಿಗೆ ಪ್ರಾರ್ಥನೆಗೆ ತೆರಳುವವರಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಂದ ಅನುಮತಿ ಪಡೆದವರಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.