ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಫೆಬ್ರವರಿ ತಿಂಗಳ ಮೊದಲನೇ ವಾರದಲ್ಲಿ ನಡೆಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತೀರ್ಮಾನಿಸಿದೆ. ಪರೀಕ್ಷಾ ಮಂಡಳಿ ಪರೀಕ್ಷಾ ಶುಲ್ಕವನ್ನು 35.ರೂ. ಏಕಾಏಕಿ ಹೆಚ್ಚಿಸಿದೆ.
ಈ ಮೊದಲು ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರತಿ ವಿದ್ಯಾರ್ಥಿಯಿಂದ 25 ರೂ. ಶುಲ್ಕವನ್ನು ಪಡೆಯುತ್ತಿತ್ತು. ಈಗ ಪರೀಕ್ಷಾ ಶುಲ್ಕವನ್ನು 60 ರೂ. ಏರಿಕೆ ಮಾಡುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿ ಆದೇಶಿಸಿದೆ.
ರಾಜ್ಯದಲ್ಲಿ ಒಟ್ಟು 15 ಸಾವಿರ ಪ್ರೌಢಶಾಲೆಗಳಿದ್ದು, ಈ ಬಾರಿ 8 ಲಕ್ಷ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆಗೆ ಕುಳಿತುಕೊಳ್ಳಬಹುದು ಎಂದು ಪರೀಕ್ಷಾ ಮಂಡಳಿ ಅಂದಾಜಿಸಿದೆ.
ಕೋವಿಡ್-19 ಹೆಚ್ಚುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ 2020-21 ನೇ ಸಾಲಿನಲ್ಲಿ ಕೇವಲ 40 ಅಂಕಗಳಿಗೆ ವಸ್ತುನಿಷ್ಠ ಮಾದರಿ ಪ್ರಶ್ನೆಗಳುಳ್ಳ ಪರೀಕ್ಷೆ ನಡೆಸಿತ್ತು. ಉತ್ತರಗಳನ್ನು ಒಎಂಆರ್ ಶೀಟ್ ಲ್ಲಿ ಬರೆಸಿ, ಮೌಲ್ಯಮಾಪನ ಮಾಡಲಾಗಿತ್ತು. ಆದರೆ ಈ ವರ್ಷ ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆ ಹಾಗೂ ಪೂರ್ವಸಿದ್ಧತಾ ಪರೀಕ್ಷೆಗಳನ್ನು 2019-20ನೇ ಸಾಲಿನಲ್ಲಿ ನಡೆಸಿದ ಮಾದರಿಯಲ್ಲೇ ಒಟ್ಟು 625 ಅಂಕಗಳಿಗೆ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಥಮಭಾಷಾ ವಿಷಯಕ್ಕೆ ಒಟ್ಟು 100 ಅಂಕಗಳಿಗೆ ಪರೀಕ್ಷೆ ಹಾಗೂ 25 ಅಂಕಗಳಿಗೆ ಆಂತರಿಕ ಮೂಲಕ ಮೌಲ್ಯಮಾಪನ ನಡೆಸಲಾಗುತ್ತದೆ ಉಳಿದ ಎಲ್ಲಾ ವಿಷಯಗಳಿಗೆ 80 ಅಂಕಗಳಿಗೆ ಪರೀಕ್ಷೆ ಮತ್ತು 20 ಅಂಕಗಳಿಗೆ ಆಂತರಿಕವಾಗಿ ಮೌಲ್ಯಮಾಪನ ನಡೆಯಲಿದೆ ಎಂದು ಪ್ರೌಢಶಿಕ್ಷಣ ಇಲಾಖೆಯ ತಿಳಿಸಿದೆ.