ಸೇನೆಯ ತಪ್ಪು ಗ್ರಹಿಕೆಯಿಂದ 14 ನಾಗರಿಕರ ಹತ್ಯೆ ನಡೆದು ಎರಡು ದಿನ ಕಳೆದರೂ ನಾಗಾಲ್ಯಾಂಡಿನಲ್ಲಿ ಜನರ ಆಕ್ರೋಶ ಕಡಿಮೆಯಾಗಿಲ್ಲ.
ಬುಡಕಟ್ಟು ಸಂಘಟನೆಗಳು ಮತ್ತು ನಾಗರಿಕ ಸಂಸ್ಥೆಗಳು ರಾಜ್ಯಾದ್ಯಂತ ದಿಢೀರ್ ಬಂದ್ ಆಚರಿಸಿದವು.
ಉಗ್ರರ ವಿರುದ್ಧದ ಕಾರ್ಯಾಚರಣೆಯಾಗಿದ್ದರೂ ಸರಿ, ಗುಂಡು ಹಾರಿಸುವ ಮುನ್ನ ಯೋಧರು ವಿವೇಚನೆ ಬಳಸಬೇಕಿತ್ತು ಎಂದು ನಾಗಾಲ್ಯಾಂಡ ನ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತರಾತುರಿಯಲ್ಲಿ ಗುಂಡು ಹಾರಿಸಿದ್ದರಿಂದಲೇ ಇಷ್ಟೆಲ್ಲಾ ಅಮಾಯಕರ ಸಾವು-ನೋವು ಉಂಟಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಮೋನ್ ಪ್ರದೇಶದಲ್ಲಿ ಬಂಡುಕೋರರ ಚಲನವಲನದ ಬಗ್ಗೆ ಮಾಹಿತಿ ಬಂದಿದ್ದರಿಂದ 21 ಪ್ಯಾರಾ ಕಮಾಂಡೊ ಪಡೆ ಕಾರ್ಯಾಚರಣೆ ಕೈಗೊಂಡಿತ್ತು. ಅದೇ ವೇಳೆ ಗಣಿ ಕೆಲಸ ಮುಗಿಸಿ ಮನೆಗೆ ವಾಪಸಾಗುತ್ತಿದ್ದ 10 ಕಾರ್ಮಿಕರನ್ನು ಹೊತ್ತ ವಾಹನ ಎದುರಾದಾಗ ಕಮಾಂಡೊ ಪಡೆ ಗಲಿಬಿಲಿಗೊಂಡಿತು. ವಾಹನವನ್ನು ತಡೆದು ನಿಲ್ಲಿಸಲು ಯೋಧರು ಮುಂದಾದರು. ಕೈಸನ್ನೆ ಮಾಡಿ, ನಿಲ್ಲಿಸುವಂತೆ ಸೂಚಿಸಿದರು. ಆದರೆ ಯೋಧರು ಹಠಾತ್ ಎದುರಾಗಿದ್ದರಿಂದ ವಿಚಲಿತಗೊಂಡ ಚಾಲಕ ಮತ್ತಷ್ಟು ವೇಗದಿಂದ ಪರಾರಿಯಾಗಲು ಯತ್ನಿಸಿದ. ಮೊದಲೇ ಸಂಶಯದಲ್ಲಿದ್ದ ಯೋಧರಿಗೆ ಇವರು ಉಗ್ರರೇ ಇರಬೇಕೆಂದು ತಪ್ಪಾಗಿ ಗ್ರಹಿಸಿ ಗುಂಡಿನ ದಾಳಿ ನಡೆಸಿದರು ಎಂದು ಅಮಿತ್ ಶಾ ಘಟನೆಯ ನೈಜ ಚಿತ್ರಣ ಕುರಿತು ಸದನಕ್ಕೆ ವಿವರಿಸಿದ್ದಾರೆ.
ಮೋನ್ ಪಟ್ಟಣ ಸೇರಿ ರಾಜ್ಯದ ಬಹುತೇಕ ಕಡೆಗಳಲ್ಲಿ ಅಂಗಡಿ-ಮುಂಗಟ್ಟುಗಳು ದಿನಪೂರ್ತಿ ಬಾಗಿಲು ಹಾಕಿದ್ದವು. ನಾಗಾ ವಿದ್ಯಾರ್ಥಿ ಒಕ್ಕೂಟ ಐದು ದಿನಗಳ ಶೋಕಾಚರಣೆ ಘೋಷಿಸಿದೆ. ರಾಜ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವುದರಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಕೇಂದ್ರ ಸರಕಾರ ಸಹ ನಿಗಾ ಇರಿಸಿದೆ. ನಾಗಾಲ್ಯಾಂಡ್ ಪೊಲೀಸರು ಯೋಧರ ವಿರುದ್ಧ ಸ್ವಯಂಪ್ರೇರಿತವಾಗಿ ಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಕ್ರೋಶದಲ್ಲಿ ನಾಗಾಲ್ಯಾಂಡ್ ಜನತೆ
Date: