ಡಾಕ್ಟರ್ ಕಸ್ತೂರಿರಂಗನ್ ಅವರ ವರದಿಯನ್ನು ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರ ವಿರೋಧಿಸಿದೆ.
ಪಶ್ಚಿಮಘಟ್ಟಗಳಲ್ಲಿ ಪರಿಸರ ಸೂಕ್ಷ್ಮವಲಯಗಳ ಘೋಷಣೆಗೆ ಸಂಬಂಧಿಸಿದ ಈ ವರದಿಯನ್ನು ತಿರಸ್ಕರಿಸುವಂತೆ ರಾಜ್ಯ ಸರ್ಕಾರವು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಮುಂದೆ ಬೇಡಿಕೆ ಇಟ್ಟಿದೆ.
ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿದರು.
“ಉಪಗ್ರಹ ಚಿತ್ರಗಳ ಆಧಾರದ ಮೇಲೆ ಕಸ್ತೂರಿರಂಗನ್ ವರದಿ ಸಿದ್ಧಪಡಿಸಲಾಗಿದೆ ವಾಸ್ತವಿಕತೆ ದೂರವಾಗಿದೆ. ಈ ವರದಿ ಆಧಾರದಲ್ಲಿ ಪರಿಸರ ಸೂಕ್ಷ್ಮ ವಲಯ ಗಳನ್ನು ಘೋಷಿಸಿದರೆ ಪಶ್ಚಿಮಘಟ್ಟ ಪ್ರದೇಶದ ಜನರ ಜೀವನೋಪಾಯಕ್ಕೆ ಧಕ್ಕೆಯಾಗುತ್ತದೆ. ಕಸ್ತೂರಿ ರಂಗನ್ ವರದಿಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮತ್ತು ಈ ಭಾಗದ ಜನರ ವಿರೋಧವಿದೆ” ಎಂದು ಬೊಮ್ಮಾಯಿ ಅವರು ಕೇಂದ್ರ ಸಚಿವರಿಗೆ ತಿಳಿಸಿದರು.
ಈ ಕುರಿತಂತೆ ನಿರ್ಣಯಕ್ಕೂ ಮುನ್ನ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಹಿರಿಯ ಅಧಿಕಾರಿಗಳನ್ನು ಕರ್ನಾಟಕಕ್ಕೆ ಕಳುಹಿಸಿ ಚರ್ಚಿಸಲಾಗುವುದು. ಆ ಬಳಿಕವೇ ತೀರ್ಮಾನಿಸಲಾಗುವುದು ಎಂದು ಕೇಂದ್ರ ಸಚಿವರು ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದ್ದಾರೆ.