ಮಣ್ಣಿನಿಂದ ಜೀವ, ಮಣ್ಣಿನಿಂದ ಕಾಯ, ಮಣ್ಣು ಅಳಿದರೆ ಮಾನವ ಅಳಿದಂತೆ.ಮಣ್ಣು ಒಮ್ಮೆ ನಾಶವಾದರೆ, ಪುನಃ ಪಡೆಯಲಾಗದ ಅಮೂಲ್ಯ ಸಂಪತ್ತಾಗಿರುವುದರಿಂದ ಇದನ್ನು ಉಳಿಸಲೇಬೇಕಾದ ಮಹತ್ತರ ಜವಾಬ್ದಾರಿ ಹಾಗೂ ಕರ್ತವ್ಯ ಪ್ರತಿಯೊಬ್ಬರದ್ದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ನೀಡಿದ್ದಾರೆ.
ಪ್ರತಿ ವರ್ಷ ಧ್ಯೇಯವಾಕ್ಯದೊಂದಿಗೆ ಈ ದಿನ ಆಚರಣೆಗೊಳ್ಳುತ್ತದೆ. ವಿಶ್ವ ಮಣ್ಣು ದಿನ-2021 ಡಿ.5 ರ ಧ್ಯೇಯ ‘ಮಣ್ಣಿನ ಸವುಳಾಗುವಿಕೆಯನ್ನು ತಡೆಗಟ್ಟಿ, ಮಣ್ಣಿನ ಉತ್ಪಾದಕತೆ ಹೆಚ್ಚಿಸಿ’ ಎಂದು ಘೋಷಿಸಿದೆ.
ಮಣ್ಣು ಪ್ರಕೃತಿಯ ಒಂದು ಅಮೂಲ್ಯ ಕೊಡುಗೆ. ಮನುಷ್ಯ , ಪ್ರಾಣಿ, ಜೀವಿಗಳು, ಸಸ್ಯಗಳಿಗೆ ಆಧಾರವೇ ಮಣ್ಣು . ಮಣ್ಣಿನಿಂದ ಜೀವ, ಮಣ್ಣಿನಿಂದ ಕಾಯ, ಮಣ್ಣು ಅಳಿದರೆ ಮಾನವ ಅಳಿದಂತೆ ಎಂದು ತಿಳಿಸಿದ ಶ್ರೀ ಪುರಂದರದಾಸರ ಮಾರ್ಮಿಕ ನಿಲುವು ನಿತ್ಯ ಸತ್ಯವಾಗಿದೆ. ಜಗತ್ತಿನ ಶೇ. 95 ರಷ್ಟು ಆಹಾರ ಮಣ್ಣಿನಿಂದಲೇ ದೊರಕುವುದು. ಈಗಾಗಲೇ ಶೇ.33 ರಷ್ಟು ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಡಿರುವುದು ಕಂಡುಬಂದಿರುವುದರಿಂದ ಉತ್ಪಾದಕತೆಯಲ್ಲಿ ಶೇ.17 ರಷ್ಟು ಕಡಿಮೆಯಾಗಿದೆ.ಮಣ್ಣು ಒಮ್ಮೆ ನಾಶವಾದರೆ, ಪುನಃ ಪಡೆಯಲಾಗದ ಅಮೂಲ್ಯ ಸಂಪತ್ತು. ಸಸ್ಯ ಸೇರಿದಂತೆ ಸಕಲ ಜೀವಿಗಳಿಗೆ ಜೀವವಾಗಿದೆ. ಮಣ್ಣಿನ ಫಲವತ್ತತೆ ಪೋಷಕಾಂಶಗಳು ಮಾತ್ರವಲ್ಲ, ಅನುಕೂಲಕರ ಜೀವಿಗಳು, ನೀರು ಹಾಗೂ ಗಾಳಿಯ ಸಂಬಂದಗಳನ್ನು ಒಳಗೊಂಡಿದೆ. ಸಜೀವ ಮಣ್ಣು ಸಕಲ ಜೀವಿಗಳಿಗೆ ಆಹಾರ, ಮೇವು, ವಸತಿ, ಇಂಧನ ಇತ್ಯಾದಿ ಒದಗಿಸುತ್ತಿದೆ. ಮಳೆ ನೀರನ್ನು ಸಂಗ್ರಹಿಸಿ ಶುದ್ಧ ಮಾಡುತ್ತದೆ. ಸಾವಯವ ವಸ್ತುವನ್ನು ಪೋಷಕಾಂಶಗಳಾಗಿ ಬದಲಿಸುತ್ತದೆ. ಪ್ರವಾಹಗಳನ್ನು ಹಾಗೂ ಹವಾಮಾನ ಏರುಪೇರನ್ನು ತಡೆಯುತ್ತದೆ. ಭೂಮಿ ಮೇಲಿನ ಜೀವ ಜಂತುಗಳಿಗೆ ಆಶ್ರಯ ನೀಡುತ್ತದೆ. ಆದ್ದರಿಂದ ಮಣ್ಣಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಮಣ್ಣಿನ ದಿನವನ್ನು ಆಚರಿಸುವಂತೆ ಅಂತಾರಾಷ್ಟ್ರೀಯ ಮಣ್ಣು ವಿಜ್ಞಾನ ಸಂಸ್ಥೆ 2002ರಲ್ಲೇ ಶಿಫಾರಸು ಮಾಡಿದ್ದು, ನಂತರ 2014ರ ಡಿಸೆಂಬರ್ 5 ರಂದು ಮೊದಲ ಬಾರಿಗೆ ಅಧಿಕೃತವಾಗಿ ಅಂತರಾಷ್ಟ್ರೀಯ ಮಣ್ಣು ದಿನವನ್ನು ಆಚರಿಸಲಾಯಿತು. . ಮಣ್ಣಿನ ಸವಕಳಿ, ರಾಸಾಯನಿಕ ಗೊಬ್ಬರದ ಅಸಮತೋಲನ ಬಳಕೆಯಿಂದ ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಲಕ್ಷಣಗಳು ನಾಶವಾಗುತ್ತಿದೆ. ಮಣ್ಣಿನಲ್ಲಿ ಸವುಳು, ಜವುಳು, ಆಮ್ಲ ಮತ್ತು ಕ್ಷಾರಮಯ ವಾಗಿ ಬೆಳೆಗಳ ಉತ್ಪಾದನೆ ಕುಂಠಿತವಾಗುತ್ತಿದೆ. ಕರಗುವ ಲವಣಗಳನ್ನು ಭೂಮಿಯಲ್ಲಿ ಉಳಿಸಿಕೊಂಡಾಗ ಮಣ್ಣಿನ ಸವುಳು ಸಂಭವಿಸುತ್ತದೆ. ಇದು ನೈಸರ್ಗಿಕವಾಗಿ ಅಥವಾ ಅನುಚಿತ ಮಾನವ ಚಟುವಟಿಕೆಗಳಿಂದ, ವಿಶೇಷವಾಗಿ ಕೃಷಿ ಪದ್ಧತಿಗಳಿಂದ ಸಂಭವಿಸುತ್ತದೆ. ಇದಲ್ಲದೆ, ಕಡಿಮೆ ಉಪ್ಪು ಕರಗುವಿಕೆಯಿಂದಾಗಿ ಕೆಲವು ಭೂಮಿಗಳು ಆರಂಭದಲ್ಲಿ ಚೌಳಾಗುತ್ತದೆ ಆದ್ದರಿಂದ ಕೃಷಿಕರು ಮಣ್ಣು ಸವುಳಾಗುವುದನ್ನು ತಪ್ಪಿಸುವುದನ್ನು ಗಮನದಲ್ಲಿಟ್ಟುಕೊಂಡೇ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಬೇಕು.ಮಣ್ಣು ಸವುಕಳಿ ತಪ್ಪಿಸಲು ಕೃಷಿ ಇಲಾಖೆಯನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ವಿಶ್ವ ಮಣ್ಣಿನ ದಿನ
Date: