ಕೋವಿಡ್ ವೈರಸ್ ನ ರೂಪಾಂತರಿ ಓಮಿಕ್ರಾನ್ ವೈರಾಣು ಸೋಂಕು ಹರಡುವುದಕ್ಕಿಂತಲೂ ಮೂರು ಪಟ್ಟು ಹೆಚ್ಚು ತ್ವರಿತವಾಗಿ ಮರು ಸೋಂಕು ಹರಡುತ್ತಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಅವರು ತಿಳಿಸಿದ್ದಾರೆ.
‘ಓಮಿಕ್ರಾನ್ ರೂಪಾಂತರ ತಳಿಯನ್ನು ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಮೊದಲೇ ಪತ್ತೆ ಮಾಡಿದ್ದಾರೆ. ಅದೊಂದೇ ಕಾರಣಕ್ಕೆ ದಕ್ಷಿಣ ಆಫ್ರಿಕಾದಲ್ಲೇ ಓಮಿಕ್ರಾನ್ ವಿಕಾಸವಾಗಿದೆ ಎಂದಲ್ಲ. ಅದು ಬೇರೆ ದೇಶಗಳಲ್ಲಿ ವಿಕಾಸ ವಾಗಿರಬಹುದು. ಬಹುಶಃ ವೈರಾಣು ಸಂರಚನೆ ವಿಶ್ಲೇಷಣೆ ಇಲ್ಲದೆ ಇರುವ ದೇಶಗಳಲ್ಲಿ ಇದು ವಿಕಾಸವಾಗಿರಬಹುದು. ಆದರೆ ಈಗಿನ ಪರಿಸ್ಥಿತಿ ಗಮನಿಸಿದರೆ, ಓಮಿಕ್ರಾನ್ ಮೊದಲು ವಿಕಾಸ ವಾಗಿದ್ದು ಎಲ್ಲಿ ಎಂಬುದು ಪತ್ತೆಯಾಗದೆ ಇರುವ ಸಾಧ್ಯತೆಯೇ ಹೆಚ್ಚು’ ಎಂದು ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
ಅಲ್ಲದೆ ‘ಗಾಬರಿಯಾಗುವ ಅಗತ್ಯವಿಲ್ಲ ಹಿಂದೆ ಬೇರೆ ತಳಿಗಳನ್ನು ಎದುರಿಸಿದ ಅನುಭವದ ಆಧಾರದಲ್ಲೇ ಓಮಿಕ್ರಾನ್ ತಡೆಗಟ್ಟಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು’ ಎಂದಿದ್ದಾರೆ.
ಕೋವಿಡ್ ತಡೆಗಟ್ಟಲು ನೀಡಲಾಗುತ್ತಿರುವ ಲಸಿಕೆಗಳು ಓಮಿಕ್ರಾನ್ ವಿರುದ್ಧ ಪರಿಣಾಮಕಾರಿಯಲ್ಲ ಎಂಬುದು ದೃಢಪಟ್ಟಿಲ್ಲ. ಅದನ್ನ ಪತ್ತೆಮಾಡುವ ಅಧ್ಯಯನಗಳು ನಡೆಯುತ್ತಿವೆ ಅಧ್ಯಯನಗಳು ಪೂರ್ಣವಾಗಲು ಇನ್ನೂ ಒಂದು ಅಥವಾ ಎರಡು ವಾರ ಬೇಕಾಗಬಹುದು ನಾವು ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಸೌಮ್ಯ ಸ್ವಾಮಿನಾಥನ್ ತಿಳಿಸಿದ್ದಾರೆ.