ಇತ್ತೀಚೆಗಷ್ಟೇ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳಕ್ಕೆ ಅವಕಾಶ ನೀಡಿದ್ದ ರಾಜ್ಯ ಸರ್ಕಾರ, ಈಗ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕವನ್ನು ಇದ್ದಕ್ಕಿದ್ದಂತೆ 10 ಸಾವಿರ ರೂ.ಗಳಷ್ಟು ಹೆಚ್ಚಿಸಿದೆ.
ಸರ್ಕಾರಿ ಕಾಲೇಜುಗಳಿಗೆ ಈ ಹಿಂದೆ ವಿದ್ಯಾರ್ಥಿಗಳು ಒಟ್ಟು 23,810 ರೂ.ಗಳನ್ನು ಪಾವತಿ ಮಾಡಬೇಕಿತ್ತು. ಈಗ ಶುಲ್ಕ ಹೆಚ್ಚಿಸಿರುವುದರಿಂದ 33,810 ರೂ.ಗಳನ್ನು ಪಾವತಿಸಬೇಕಿದೆ.
ಖಾಸಗಿ ಎಂಜಿನಿಯರಿಂಗ್ ಕಾಲೇಜ್ ಮತ್ತು ಡೀಮ್ಡ್ ವಿವಿಗಳಲ್ಲಿರುವ ಸರ್ಕಾರಿ ಕೋಟಾದ ಸೀಟುಗಳಿಗೂ ಈ ನಿಯಮ ಅನ್ವಯವಾಗಲಿದೆ.
ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳದ ಬಗ್ಗೆ ಸರ್ಕಾರ ಕಾಲೇಜುಗಳ ಅಭಿವೃದ್ಧಿಯ ನೆಪ ಹೇಳುತ್ತಿದೆ.
ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಸೇರುವ ಬಹುತೇಕರು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಕೋವಿಡ್ ನಿಂದಾಗಿ ಪೋಷಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಶುಲ್ಕ ಹೆಚ್ಚಿಸಿರುವುದು ಯಾವ ನ್ಯಾಯ? ಎಂದು ಸರ್ಕಾರದ ಈ ನಿರ್ಧಾರದಿಂದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ರಾಜ್ಯ ಸರ್ಕಾರ ಏಕಾಏಕಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳ ಮಾಡಿರುವುದು ವಿದ್ಯಾರ್ಥಿ ವಿರೋಧಿ ಮತ್ತು ಶಿಕ್ಷಣ ವಿರೋಧಿ ನಿಲುವಾಗಿದೆ. ಶುಲ್ಕ ಏರಿಕೆಯನ್ನು ವಾಪಸ್ ಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ ಅನಿವಾರ್ಯ” ಎಂದು ಎ ಐಡಿ ಎಸ್ ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಹೇಳಿದ್ದಾರೆ.