ನಮಗೆ ಬೇಕಾದಾಗ ಮತ್ತು ಉಪಯೋಗಿಸುವ ಹೊತ್ತಿನಲ್ಲಿ ಮಾತ್ರ ಸಾರ್ವಜನಿಕ ಆಸ್ತಿ ನಮ್ಮದು. ಇನ್ನುಳಿದಂತೆ ಸಾರ್ವಜನಿಕ ಆಸ್ತಿ ನಮ್ಮದಲ್ಲವೇ ಅಲ್ಲ. ಅದು ಸರ್ಕಾರಕ್ಕೆ ಸೇರಿದ್ದು. ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವ , ಕಾಪಾಡುವ ಜವಾಬ್ದಾರಿ ನಮ್ಮೆಲ್ಲರದ್ದೂ ಆಗಿದೆ.
ಆದರೆ ಅದನ್ನು ನಮ್ಮ ಜನ ಸರ್ಕಾರದ ಸಂಬಳ ಪಡೆಯುವ ಅಧಿಕಾರಗಳದ್ದೇ ಹೊಣೆಗಾರಿಕೆ ಅನ್ನುವ ಹಾಗೆ ವರ್ತಿಸುತ್ತಾರೆ.
ಸಾರ್ವಜನಿಕ ಗ್ರಂಥಾಲಯಗಳು, ಶಾಲಾ ಕಾಲೇಜು, ಸಾರ್ವಜನಿಕ ಶೌಚಾಲಯ, ಹಾಸ್ಟೆಲ್ ಗಳು, ಸಾರ್ವಜನಿಕ ಪಾರ್ಕ್ ಗಳು, ಸಾರ್ವಜನಿಕ ಬಸ್ ನಿಲ್ದಾಣ, ರೈಲುಗಳು ಇವೆಲ್ಲವೂ ಸಾರ್ವಜನಿಕ ಪ್ರಾಪರ್ಟಿ ಎಂದೆನಿಸಿಕೊಳ್ಳುತ್ತದೆ. ಸಾರ್ವಜನಿಕ ಆಸ್ತಿಯ ನಿರ್ವಹಣೆ ಹೇಗಿದೆ ಎಂಬುದರ ಮೇಲೆ ಸಮಾಜವೊಂದರ ಅಭಿವೃದ್ಧಿಯು ಅಳೆಯಲ್ಪಡುತ್ತದೆ. ಉಚಿತವಾಗಿ ಅಥವಾ ಕಡಿಮೆ ಖರ್ಚಿನಲ್ಲಿ ಜನರೆಲ್ಲ ಉಪಯೋಗಿಸಬಹುದಾದ ಇಂಥ ಸಾರ್ವಜನಿಕ ಆಸ್ತಿಗಳು ಸುಸ್ಥಿರ ಸಮಾಜಕ್ಕೆ ಬಹುಮುಖ್ಯವಾದವು.
ಚಿಕ್ಕ ಉದಾಹರಣೆ ಹೇಳುವುದಾದರೆ, ಸಾರ್ವಜನಿಕ ಶೌಚಾಲಯಗಳು, ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಅಗತ್ಯವಿರುವ ಕಡೆ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಪಬ್ಲಿಕ್ ಟಾಯ್ಲೆಟ್ ಗಳನ್ನು ಬಳಸಿದ ನಂತರ ಶುಚಿಯಾಗಿಡುವುದಿಲ್ಲ. ಅನಗತ್ಯವಾಗಿ ನೀರನ್ನು ಪೋಲು ಮಾಡುತ್ತಾರೆ. ಗೋಡೆಗಳ ಮೇಲೆ ಅಸಹ್ಯವಾದ ಬರಹಗಳನ್ನು ಗೀಚುವವರು ತಮ್ಮ ಮನೆಯಲ್ಲಿ ಯಾಕೆ ಹೀಗೆ ಮಾಡುವುದಿಲ್ಲ? ಎಂಬ ಪ್ರಶ್ನೆ ಮೂಡುತ್ತದೆ. ರೈಲುಗಳಲ್ಲಿ ಪ್ರಯಾಣಿಸುವಾಗ ಟೀ ಕಪ್ ಗಳು, ಮಂಡಕ್ಕಿ ಪೇಪರ್, ಹಣ್ಣಿನ ಸಿಪ್ಪೆಗಳನ್ನು ತಾವು ಕೂತ ಸೀಟಿನಡಿಯೇ ಎಸೆಯುತ್ತಾರೆ. ಕಸದ ಬುಟ್ಟಿಗಳಿದ್ದರೂ ಅದನ್ನು ಉಪಯೋಗಿಸುವವರು ವಿರಳ. ಬಸ್ಸಿಗೆ ಕಲ್ಲು ಹೊಡೆಯುವುದು, ಬೆಂಕಿ ಹಚ್ಚುವುದು, ಪೊಲೀಸರ ಮೇಲೆ ಕಲ್ಲು ತೂರುವುದೂ ಹೀಗಿಲ್ಲ ಮಾಡುವುದರ ಮೂಲಕ ಸರ್ಕಾರಕ್ಕೆ ಪಾಠ ಕಲಿಸುತ್ತಿದ್ದೆವೆ ಎಂದು ಮೂರ್ಖರಂತೆ ವರ್ತಿಸುತ್ತಾರೆ. ಯಾವುದೋ ರೂಪದಲ್ಲಿ ಸಮಾಜಕ್ಕೆ ಬರಬೇಕಿದ್ದ ಹಣ ಈ ನಷ್ಟವನ್ನು ಸರಿದೂಗಿಸಲು ಉಪಯೋಗವಾದರೆ ನಿಜವಾಗಿಯೂ ನಷ್ಟ ಯಾರಿಗೆ? ನಮಗೇ ಅಲ್ಲವೇ…
ಅಪರಾಧ ಚಿಕ್ಕದಾದರೂ ದೊಡ್ಡದಾದರೂ ಅದು ಅಪರಾಧವೇ ಎನ್ನುವುದನ್ನು ಎಲ್ಲರೂ ನೆನಪಿಸಿಕೊಳ್ಳಬೇಕು. ಕಚೇರಿಯ ಕೆಲಸ ಮುಗಿದ ಮೇಲೆ ಸ್ವಂತ ಕೆಲಸ ಮಾಡಲಿಕ್ಕೆಂದು ಬೇರೆಯೇ ಮೇಣದಬತ್ತಿ ಇಟ್ಟುಕೊಳ್ಳುತ್ತಿದ್ದ ಮಹಾನುಭಾವರೂ ನಮ್ಮ ದೇಶದಲ್ಲಿದ್ದರು ಎಂದರೆ ಅದೀಗ ನಂಬಲಾಗದ ವಿಚಾರ. ನಾವು ಕಸವನ್ನು ಪಕ್ಕದ ಸೈಟಿಗೆ ಎಸೆಯಬಹುದು, ಆದರೆ ಬೇರೆಯವರು ಎಸೆಯಬಾರದು. ಇನ್ನು ನೀರಿನ ಉಪಯೋಗದಲ್ಲಂತೂ ಬಿಡಿ. ಮುನ್ಸಿಪಾಲ್ಟಿಯ ನೀರು ತಾನೆ ಬರಲಿ ಬಿಡಿ.. ಹಾಗೆಯೇ ಸುರಿಯಲಿ ಬಿಡಿ. ಆದರೆ ನಮ್ಮ ಬಾವಿಯ ನೀರನ್ನು ಸ್ವಲ್ಪವೂ ವ್ಯರ್ತವಾಗಲು ಬಿಡುವುದಿಲ್ಲ. ಬಸ್ಸುಗಳ ಸೀಟಿನ ಎದುರಿಗೆ, ಕಾಲೇಜಿನ ಬೆಂಚುಗಳ ಮೇಲೆ ಎಲ್ಲಿಂದರಲ್ಲಿ ಬರೆಯುವವರು ಕಡಿಮೆಯೇ.? ಮನೆ ಬಾಗಿಲಿಗೆ ಕಸ ತೆಗೆದುಕೊಂಡು ಹೋಗುವ ವಾಹನ ಬಂದರೂ ಅದಕ್ಕೆ ಕಸ ನೀಡದೇ ಮನೆ ಮುಂದಿನ ಕಾಲುವೆಗೊ ಪಕ್ಕದ ಮನೆಯವರ ಸೈಟಿಗೊ ಎಸೆಯುವವರು ಬಹಳ ಮಂದಿ ಇದ್ದಾರೆ.
ಸಾರ್ವಜನಿಕ ಅಭಿವೃದ್ಧಿಯ ರಕ್ಷಣೆಗೆ ಸಾರ್ವಜನಿಕ ಆಸ್ತಿಯನ್ನು ಜೋಪಾನ ಮಾಡುವ ಕರ್ತವ್ಯ ನಮ್ಮಲ್ಲರದ್ದು ಆಗಿದೆ. ಸಾರ್ವಜನಿಕ ಗ್ರಂಥಾಲಯಗಳಿಂದ ಪುಸ್ತಕ ಕದಿಯುವುದು, ಹಾಳೆಗಳನ್ನು ಹರಿಯುವುದು, ಹತ್ತಾರು ಕಡೆ ಇಂಥ ಪುಟ ನೋಡಿ ಎಂದು ಬರೆಯುವುದು ಇವೆಲ್ಲ ಏಕೆ ಮಾಡುತ್ತೇವೆಯೋ ಇಂದಿಗೂ ಗೊತ್ತಿಲ್ಲ.
ಶಾಲೆಯಲ್ಲಿ ಪೆನ್ಸಿಲ್ ಕದ್ದ ಮಗನಿಗೆ ತಂದೆ, ಯಾಕಪ್ಪ ಶಾಲೆಯಲ್ಲಿ ಕದ್ದೆ? ಹೇಳಿದರೆ ನಾನೇ ಕಚೇರಿಯಿಂದ ತಂದು ಕೊಡುತ್ತಿದ್ದೆನಲ್ಲಾ ಎಂದು ಹೇಳುವುದು ಖಂಡಿತಾ ಜೋಕ್ ಅಲ್ಲ. ಕಚೇರಿಯ ವಾಹನಗಳನ್ನು ಮನೆ ಮಂದಿಯ ಉದ್ಯೋಗಕ್ಕೆ ಮೀಸಲಾಗಿಡುವ ಸರ್ಕಾರಿ ನೌಕರರು ಸಾರ್ವಜನಿಕ ಆಸ್ತಿಯನ್ನು ಸ್ವಂತಕ್ಕಾಗಿ ಬಳಸುತ್ತಾ ಜನಸಾಮಾನ್ಯರಿಗೆ ನ್ಯಾಯ, ನಿಷ್ಠೆಯ ಪಾಠ ಮಾಡುತ್ತಾರೆ.
ನಾವು ಹೇಗಿದ್ದರೂ ಜನರೆಲ್ಲ ಸರಿ ಇರಬೇಕು ಎಂದು ನಿರೀಕ್ಷಿಸುವವರೇ ಜಾಸ್ತಿ.
ಯಾವಾಗಲೂ ನಾವು ಇತರರಿಗೆ ಏನನ್ನು ನೀಡುತ್ತೆವೆಯೋ ಅದೇ ನಮಗೆ ವಾಪಸ್ ಸಿಗುತ್ತದೆ. ಅದಕ್ಕೆ ನಮ್ಮ ಪೂರ್ವ ಜನರು ಕೊಟ್ಟಿದ್ದು ತನಗೆ ಎಂದು ಹೇಳಿದ್ದು. ಆದರೆ ನಾವದನ್ನು ಮರೆತುಬಿಡುತ್ತೇವೆ. ಅಪ್ರಾಮಾಣಿಕತೆಯನ್ನು ನಾವು ರೂಡಿಸಿಕೊಂಡು ಪ್ರಮಾಣಿಕತೆಯನ್ನು ಸಮಾಜದಿಂದ ನಿರೀಕ್ಷಿಸುವುದು ಎಷ್ಟು ಮೂರ್ಖತನವಲ್ಲವೇ? …
ಅದಕ್ಕಾಗಿಯೇ ಮನುಷ್ಯನ ಮನಸ್ಸಿನ ಸ್ವಭಾವವನ್ನು ವಿಚಿತ್ರ ಎನ್ನುವುದು. ಬಿತ್ತಿದ್ದು ಬೇವಾದರೂ ರುಚಿಯಾದ ಮಾವಿನ ಹಣ್ಣನ್ನು ತಿನ್ನಲು ಬಯಸುತ್ತದೆ. ಎಲ್ಲರ ಹತ್ತಿರವೂ ಕೊಪ್ಪರಿಗೆಗೆ ಹಾಲು ಹಾಕಲು ಹೇಳಿದಾಗ ತಾನೊಬ್ಬ ನೀರು ಹಾಕಿದರೆ ಯಾರಿಗೆ ಗೊತ್ತಾಗುತ್ತದೆ ಎಂದು ನೀರು ಹಾಕಿದವರೆಲ್ಲರೂ ಕೊಪ್ಪರಿಗೆ ತುಂಬಾ ಹಾಲನ್ನೇ ನಿರೀಕ್ಷಿಸಿದ್ದರು. ನೀರು ಸುರಿದ ಕೊಪ್ಪರಿಗೆಯಲ್ಲಿ ಹಾಲು ಇರಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ನಾವು ಅಪ್ರಾಮಾಣಿಕರಾಗಿದ್ದು, ಜಗತ್ತು ನೆಟ್ಟಗಿರಲಿ ಸಾಧ್ಯವೇ ಇಲ್ಲ….
ವಿಚಿತ್ರ ನೋಡಿ, ಬಸ್ಸಿನಲ್ಲಿ ಐದನೇ ಕ್ಲಾಸಿನ ಮಗನ ಹತ್ತಿರ ಮೂರನೇ ಕ್ಲಾಸ್ ಎಂದು ಸುಳ್ಳು ಹೇಳಿಸಿ ಅರ್ಧ ಟಿಕೆಟ್ ನ 10 ರೂಪಾಯಿ ಉಳಿಸಿ ಬೀಗುವ ಇದೇ ಮನಸ್ಸು, ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ರೊಚ್ಚಿಗೇಳುತ್ತದೆ. ಇದು ಭ್ರಷ್ಟಾಚಾರವಲ್ಲವೇ? ಇದು ಅರ್ಥವಾದರೂ ಅರ್ಥವಾಗದಂತೆ ಇರುವ ಜನರೇ ಹೆಚ್ಚು. ನಾವು ಮಾತ್ರ ಸರಿ, ಜಗತ್ತಿನ ಎಲ್ಲರೂ ಮೂರ್ಖರು ಎಂದುಕೊಳ್ಳುವುದರ ಮೂಲಕ ನಾವು ಬೇರೆ ಯಾರನ್ನೋ ಅಲ್ಲ, ನಮ್ಮನ್ನೇ ವಂಚಿಸಿಕೊಳ್ಳುತ್ತಿದ್ದೆವೆ. ಸ್ವಾರ್ಥ ಮತ್ತು ಆತ್ಮವಂಚನೆಯ ಹಾದಿ ನಿರೀಕ್ಷಿತ ಗುರಿಯನೆಂದೂ ತಲುಪದು, ಸಾರ್ವಜನಿಕ ಆಸ್ತಿ ಇರಲಿ, ಸಾಮಾಜಿಕ ಮೌಲ್ಯಗಳಿರಲಿ ಈ ಎಚ್ಚರ ಎಂದಿಗೂ ಅಗತ್ಯ.
ನಿಮಗೇನನಿಸುತ್ತದೆ?.. ಇನ್ನಾದರೂ ಬಸ್ಸಿನಿಂದ, ಕಾರಿನಿಂದ, ಬಿಸ್ಕಿಟ್ ಕವರ್, ಚಾಕ್ಲೇಟ್ ರಾಪರ್, ಅಥವಾ ಹಣ್ಣಿನ ಸಿಪ್ಪೆಯನ್ನೆಲ್ಲಾ ರಸ್ತೆಗೆಸೆಯುತ್ತ, ‘ಡೆನ್ಮಾರ್ಕ್ , ಸಿಂಗಾಪುರ ಸಿಟಿ ಎಷ್ಟು ಕ್ಲೀನ್ ಇದೇರೀ ‘ ಎನ್ನುವ ಮುನ್ನ ಕೊಂಚ ಯೋಚಿಸೋಣವೇ?…

ಲೇಖಕರು : ಅಂಜುಮ್ ಬಿ.ಎಸ್