ಕೋವಿಡ್ ವೈರಸ್ ನ ಹೊಸ ರೂಪಾಂತರಿ ಓಮಿಕ್ರಾನ್ ವಿಶ್ವದ ಹಲವು ದೇಶಗಳಲ್ಲಿ ಕಾಣಿಸಿಕೊಂಡಿದೆ. ವಿಶ್ವವನ್ನೇ ಮತ್ತೆ ಆತಂಕಕ್ಕೆ ತಳ್ಳಿದೆ. ದಕ್ಷಿಣ ಆಫ್ರಿಕಾ, ಹಾಂಕಾಂಗ್ ಹಾಗೂ ಬೋಟ್ಸ್ವಾನಾ ದೇಶಗಳಿಂದ ವಿಮಾನಯಾನ ನಿರ್ಬಂಧಿಸುವಂತೆ ಕೇಂದ್ರಸರ್ಕಾರವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೋರಿದ್ದಾರೆ.
ನಮ್ಮಲ್ಲಿ ಹೊಸ ತಳಿ ವೈರಸ್ ಇಲ್ಲ. ಆದರೆ ಕಟ್ಟೇಚ್ಚರ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. “ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿದೆ ಎಂಬ ಸಂದರ್ಭದಲ್ಲೇ ಮೂರು ದೇಶಗಳಲ್ಲಿ ಹೊಸ ರೂಪಾಂತರಿ ತಳಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಯುರೋಪಿಯನ್ ರಾಷ್ಟ್ರಗಳು ದಕ್ಷಿಣ ಆಫ್ರಿಕಾ, ಹಾಂಕಾಂಗ್ ಮತ್ತು ಬೋಟ್ಸ್ವಾನಾ ಈ ಮೂರು ರಾಷ್ಟ್ರಗಳಿಗೆ ನಿರ್ಬಂಧ ಹೇರಿವೆ. ಓಮಿಕ್ರಾನ್ ಬಗ್ಗೆ ಡಬ್ಲ್ಯೂ ಎಚ್ಒ ಎಚ್ಚರಿಕೆ ನೀಡಿದೆ. ಈ ತಳಿ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ಗೊತ್ತಿಲ್ಲ. ಆದರೆ ಬಹಳ ವೇಗವಾಗಿ ಹರಡುತ್ತದೆ ಎಂಬ ವಿಚಾರವಿದೆ. ಹಾಗಾಗಿ ದೇಶದಲ್ಲೂ ಬಹಳ ಎಚ್ಚರಿಕೆ ವಯಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿಯವರು ಸಭೆ ನಡೆಸಿ ಕೆಲ ನಿರ್ದೇಶನ ನೀಡಿದ್ದಾರೆ. ಅಂತಾರಾಷ್ಟ್ರೀಯ ವಿಮಾನಯಾನ ನಿರ್ಬಂಧ ಹೇರಲು ಕೇಂದ್ರ ಸರ್ಕಾರ ಚಿಂತಿಸಿದೆ” ಎಂದರು.
ಕೇರಳ ರಾಜ್ಯದಿಂದ ಬರುವವರಲ್ಲಿ ಸೋಂಕು ಹರಡುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಕೇರಳ ಗಡಿಗೆ ಹೊಂದಿಕೊಂಡ ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ, ಮೈಸೂರು ಗಡಿಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಆರ್ ಟಿ ಸಿ ಪಿ ಆರ್ ನೆಗೆಟಿವ್ ಇದ್ದರೆ ಅಷ್ಟೇ ರಾಜ್ಯದೊಳಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಕೇರಳದಿಂದ ಬರುವವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು. ಗಡಿಭಾಗಗಳಲ್ಲಿ 24 ಗಂಟೆ ನಿಗಾ ವಹಿಸಲು ಸೂಚಿಸಲಾಗಿದೆ. ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟ್ ಡೋಸ್ ನೀಡಲು ಕೇಂದ್ರ ಸರ್ಕಾರದ ಅನುಮತಿ ಕೋರಲಾಗಿದೆ. ಮಾಲ್, ಸಾರ್ವಜನಿಕ ಸ್ಥಳ, ಸರ್ಕಾರಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವವರು ಡಬಲ್ ಡೋಸ್ ಲಸಿಕೆ ಪಡೆದಿರಬೇಕು. ಸರ್ಕಾರಿ ಕಚೇರಿ, ಮಾಲ್ಗಳಲ್ಲಿ ಲಸಿಕೆ ನೀಡಿಕೆ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದೆ. ಮೇಲ್ಮನೆ ಚುನಾವಣಾ ಪ್ರಚಾರಕ್ಕೆ ದೊಡ್ಡ ಸಾರ್ವಜನಿಕ ಸಭೆ ನಡೆಸುವಂತಿಲ್ಲ. ಸಭೆಯಲ್ಲಿ 50ರಿಂದ 100 ಜನರಿಗೆ ಅವಕಾಶ. ಅಲ್ಲಿಯೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಕಡ್ಡಾಯ ಎಂದು ಸಿಎಂ ಹೇಳಿದ್ದಾರೆ.
ರಾಜ್ಯ ಸರ್ಕಾರದ ಬಳಿ ಸದ್ಯ 80 ಲಕ್ಷ ಡೋಸ್ ಲಸಿಕೆ ಲಭ್ಯವಿದೆ. ಈಗಾಗಲೇ ಮೊದಲ ಡೋಸ್ ಪಡೆದವರ ಸಂಖ್ಯೆ ಶೇ. 58 ರಷ್ಟಿದ್ದು, ಡಿಸೆಂಬರ್ ಅಂತ್ಯದೊಳಗೆ ಶೇ. 70ರಷ್ಟು ತಲುಪುವ ಗುರಿ ಹೊಂದಲಾಗಿದೆ ಎಂದು ಸಿಎಂ ಬೊಮ್ಮಾಯಿ ಮಾಧ್ಯಮ ಮಿತ್ರರಿಗೆ ತಿಳಿಸಿದ್ದಾರೆ.