ಮೊದಲ ಡೋಸ್ ಕೊವಿಡ್ ಲಸಿಕೆ ಪಡೆಯಲು ಮುಗಿಬಿದ್ದ ಜನರು ಈಗ ಆರೋಗ್ಯ ಇಲಾಖೆಯವರು ಒತ್ತಾಯಿಸಿದರೂ ಎರಡನೇ ಡೋಸ್ ಪಡೆಯಲು ಒಪ್ಪುತ್ತಿಲ್ಲ. ನಿಧಾನಕ್ಕೆ ಕೊವಿಡ್
ಸಾಂಕ್ರಾಮಿಕ ರೋಗ ತಗ್ಗುತ್ತಿದ್ದಂತೆಯೇ ವ್ಯಾಕ್ಸಿನ್ ಪಡೆಯುವ ಜನರ ಧಾವಂತ ಕೂಡ ಕಡಿಮೆಯಾಗಿದೆ. ಮೊದಲ ಡೋಸ್ ಹಾಕಿಸಿಕೊಂಡವರಲ್ಲಿ 43 ಲಕ್ಷ ಜನರು ದ್ವಿತೀಯ ಲಸಿಕೆ ಅವಧಿ ಮುಗಿದರೂ ಹಾಕಿಸಿಕೊಂಡಿಲ್ಲ. ಓಮಿಕ್ರಾನ್ ವೈರಸ್ ವ್ಯಾಪಿಸುವುದನ್ನು ತಡೆಯುವ ಕ್ರಮವಾಗಿ ಲಸಿಕೆ ಅಭಿಯಾನವನ್ನು ಮತ್ತಷ್ಟು ಚುರುಕುಗೊಳಿಸಲು ಸರ್ಕಾರ ಮುಂದಾಗಿದೆ. ಹಲವು ಜಿಲ್ಲಾಧಿಕಾರಿಗಳು ‘ನೋ ವ್ಯಾಕ್ಸಿನ್, ನೋ ಎಂಟ್ರಿ’ ನಿಯಮ ಜಾರಿಗೊಳಿಸಿದ್ದಾರೆ.
ಈಗ ನೀಡುತ್ತಿರುವ ಲಸಿಕೆ ಓಮಿಕ್ರಾನ್ ಮೇಲೆ ಎಷ್ಟು ಪರಿಣಾಮಕಾರಿ ಎಂಬುದರ ಬಗ್ಗೆ ಇನ್ನೂ ಅಧ್ಯಯನ ನಡೆದಿಲ್ಲ. ಆದರೆ ಎರಡೂ ಡೋಸ್ ಲಸಿಕೆ ಪಡೆದರೆ ಅಪಾಯದಿಂದ ಪಾರಾಗಬಹುದು. ಇದು ಅತಿವೇಗದಲ್ಲಿ ಹರಡುವ ಸಾಧ್ಯತೆ ಇರುವುದರಿಂದ, ಕೊವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೊವಿಡ್ ತಾಂತ್ರಿಕ ಸಮಿತಿ ಸದಸ್ಯ ಹಾಗೂ ಮಣಿಪಾಲ ಆಸ್ಪತ್ರೆಯ ಮುಖ್ಯಸ್ಥರಾಗಿರುವ ಡಾ. ಸುದರ್ಶನ್ ಬಲ್ಲಾಳ್ ಅವರು ತಿಳಿಸಿದ್ದಾರೆ.
ಒಂದೊಮ್ಮೆ ಮೂರನೇ ಅಲೆ ಎದುರಾದರೆ, ಎರಡೂ ಡೋಸ್ ಪಡೆದವರಿಗಷ್ಟೇ ಉಚಿತ ಚಿಕಿತ್ಸೆ ನೀಡುವ ನೀತಿ ರೂಪಿಸಲು ಸರ್ಕಾರ ಚಿಂತಿಸುತ್ತಿದೆ. ಕೊವಿಡ್ ನಿಂದ ಸಾವು ಸಂಭವಿಸಿದರೆ, ಎರಡೂ ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಪರಿಹಾರ ಸಿಗುವ ಸಾಧ್ಯತೆ ಇದೆ. ಹಾಗಾಗಿ ಪ್ರತಿಯೊಬ್ಬರೂ ಎರಡು ಡೋಸ್ ಲಸಿಕೆ ಪಡೆಯಬೇಕು ಎಂದು ಆರೋಗ್ಯ ಅಧಿಕಾರಿಯೊಬ್ಬರು ಮನವಿ ಮಾಡಿದ್ದಾರೆ.
ಲಸಿಕೆ ಅಭಿಯಾನದ ಅಂಗವಾಗಿ ‘ಮನೆಮನೆ ಲಸಿಕಾ ಮಿತ್ರ’ಯೋಜನೆಯಡಿ ಆರೋಗ್ಯ ಇಲಾಖೆ ಸಿಬ್ಬಂದಿ ಪ್ರತಿ ಮನೆಗಳಿಗೆ ಭೇಟಿ ನೀಡಿ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಬಸ್, ರೈಲು, ಮೆಟ್ರೊ ಮತ್ತು ವಿಮಾನ ನಿಲ್ದಾಣದಲ್ಲಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಿ ಲಸಿಕಾಕರಣ ನಡೆಸಲಾಗುತ್ತಿದೆ.
ಮನೆಮನೆ ಲಸಿಕಾ ಮಿತ್ರ -ಅಭಿಯಾನ
Date: