ಜಮ್ಮು-ಕಾಶ್ಮೀರ ವಿಧಾನಸಭೆ ಕ್ಷೇತ್ರ ಪುನರ್ ವಿಂಗಡಣೆ ಪೂರ್ಣಗೊಂಡಿರುವ ಹಿನ್ನೆಲೆ 2022ರ ಮೇ- ಜೂನ್ ನಲ್ಲಿ ಚುನಾವಣೆ ನಡೆಯುವುದು ಖಚಿತವಾಗಿದೆ. ಈ ಮೊದಲು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ 2019ರ ಆಗಸ್ಟ್ 5ರಂದು ರದ್ದುಪಡಿಸಿ ಕೇಂದ್ರಾಡಳಿತ ಪ್ರದೇಶ ರಚಿಸಿದ ಬಳಿಕ ಇದೇ ಮೊದಲ ಬಾರಿಗೆ ನಡೆಯಲಿರುವ ಚುನಾವಣೆ ಇದಾಗಿದೆ.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ನೇತೃತ್ವ ಕ್ಷೇತ್ರ ಪುನರ್ ವಿಂಗಡನೆ ಆಯೋಗವು ತನ್ನ ಜವಾಬ್ದಾರಿಯನ್ನು ಪೂರ್ಣಗೊಳಿಸಿದ್ದು, ಕರಡು ಸಿದ್ಧಪಡಿಸಿದೆ. ಈ ಕುರಿತಂತೆ ಅಂತಿಮ ವರದಿಯನ್ನು ಸರ್ಕಾರಕ್ಕೆ ಆಯೋಗ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ವಿಧಾನಸಭೆಯಲ್ಲಿ 90 ಕ್ಷೇತ್ರಗಳು ಇವೆ. ಈ ಹಿಂದೆ ಕಾಶ್ಮೀರ ವಲಯದ 47, ಜಮ್ಮು ವಲಯದ 36 ಕ್ಷೇತ್ರಗಳು ಸೇರಿದಂತೆ 87 ಕ್ಷೇತ್ರಗಳನ್ನು ಹೊಂದಿತ್ತು. 4 ಕ್ಷೇತ್ರಗಳು ಮತ್ತೊಂದು ಕೇಂದ್ರಾಡಳಿತ ಪ್ರದೇಶ ನಡಕೆ ಸೇರಿದ್ದವು. ಹೊಸ ವಿಧಾನಸಭೆಯಲ್ಲಿ ಜಮ್ಮು ವಲಯಕ್ಕೆ 6 ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಕಾಶ್ಮೀರ ವಲಯದ 2 ಕ್ಷೇತ್ರ ಕಡಿತ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ಮುಕ್ತಾಯದ ಹಂತ ತಲುಪಿದ ಮಾಹಿತಿ ತಿಳಿಯುತ್ತಿದ್ದಂತೆಯೇ ಅಲ್ಲಿನ ಎಲ್ಲಾ ಪಕ್ಷಗಳು ಚುನಾವಣೆ ಸಿದ್ಧತೆಯಲ್ಲಿ ತೊಡಗಿವೆ.