2 ವರ್ಷಗಳ ಹಿಂದೆ ವಿಶ್ವವೇ ಬಿಚ್ಚಿ ಬೀಳಿಸಿದಂತಹ ಪುಲ್ವಾಮಾ ಧಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಈಗ ಪುಲ್ವಾಮಾ ಪ್ರಕರಣ ಮತ್ತೊಂದು ತಿರುವು ಪಡೆದಿದ್ದು ಉಗ್ರರು ಇ-ಕಾಮರ್ಸ್ ಸಂಸ್ಥೆ ಅಮೆಜಾನ್ ಮೂಲಕ ಧಾಳಿಗೆ ಬೇಕಾದ ರಾಸಾಯನಿಕ ಹಾಗೂ ಉಪಕರಣಗಳನ್ನು ಖರೀದಿಸಿರುವುದು ಬೆಳಕಿಗೆ ಬಂದಿದೆ.
ಭಾರತದಾದ್ಯಂತ ಹೆಸರುವಾಸಿಯಾಗಿರುವ ಅಮೆಜಾನ್ ಆನ್ಲೈನ್ ಮಾರುಕಟ್ಟೆ ವ್ಯಾಪಾರವು ಇತ್ತೀಚೆಗೆ ಒಂದಲ್ಲ ಒಂದು ರೀತಿಯ ಗೊಂದಲಕ್ಕೆ ಸಿಲುಕಿ ಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಕೆಲ ದಿನಗಳ ಹಿಂದೆ ಅಮೆಜಾನ್ ವಿರುದ್ಧ ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶಗಳಲ್ಲಿ ಗಾಂಜಾ ಮಾರಾಟ ಮಾಡಿದ ಪ್ರಕರಣ ದಾಖಲಾಗಿರುವ ಬೆನ್ನಲ್ಲಿಯೇ, ಈಗ ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದೆ. ಭಾರತೀಯ ಸೇನೆಯ 40 ಯೋಧರು ಹುತಾತ್ಮರಾಗಲು ಕಾರಣವಾದ ದಾಳಿಗೂ ಮುನ್ನ ಸುಧಾರಿತ ಸ್ಫೋಟಕ ಸಾಧನ ತಯಾರಿಸಲು ಬಳಸುವಂತಹ ರಾಸಾಯನಿಕ ಗಳಾದ ಅಮೋನಿಯಂ ನೈಟ್ರೇಟ್, ನೈಟ್ರೋಗ್ಲಿಸರಿನ್ ಹಾಗೂ ಬ್ಯಾಟರಿಗಳು ಸೇರಿ ಹಲವು ಉಪಕರಣಗಳನ್ನು ಆನ್ಲೈನ್ ಮೂಲಕ ಖರೀದಿಸಲಾಗಿದೆ ಎಂದು ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ.ಭಾರ್ತಿಯಾ ತಿಳಿಸಿದ್ದಾರೆ.
ಯಾಂತ್ರಿಕ ಬದುಕಿಗೆ ಒಗ್ಗಿಕೊಂಡಿರುವ ಇಂದಿನ ಜನತೆ ಅಮೆಜಾನ್ ನಂತಹ ಹಲವು ಆನ್ಲೈನ್ ಶಾಪಿಂಗ್ ಗೆ ಮುಂದಾಗಿದ್ದಾರೆ. ಇಂತಹ ಆನ್ಲೈನ್ ಶಾಪಿಂಗ್ ಗಳಿಂದ ಯುವಜನತೆ ಹಾದಿ ತಪ್ಪುತ್ತಿದ್ದಾರೆ ಎಂಬ ಆತಂಕ ಕೂಡ ಪೋಷಕರಲ್ಲಿ ಮೂಡಿದೆ.
ಇತ್ತೀಚಿಗೆ ಪುಲ್ವಾಮಾ ಧಾಳಿ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಬಂಧಿಸಿದ ವ್ಯಕ್ತಿ ನೀಡಿದ ಮಾಹಿತಿಯಿಂದಲೇ ಈ ಆತಂಕಕಾರಿ ಸಂಗತಿ ಬಹಿರಂಗವಾಗಿದೆ. ಹಾಗಾದರೆ ಈ ಮೂಲಕ ಏನು ಬೇಕಾದರೂ ಮಾರಾಟ ಮಾಡಬಹುದು ಎಂದು ಇ-ಕಾಮರ್ಸ್ ಸಂಸ್ಥೆಗಳು ಭಾವಿಸಿವೆಯೇ ಎಂದು ಭಾರ್ತಿಯಾ ಆತಂಕ ವ್ಯಕ್ತಪಡಿಸಿದ್ದಾರೆ.
ಆನ್ಲೈನ್ ಮಾರುಕಟ್ಟೆಯಿಂದಾಗಿ ಸ್ಥಳೀಯ ವರ್ತಕರು ಹೈರಾಣಾಗಿದ್ದಾರೆ. ಜೀವನ ನಡೆಸುವುದೇ ಅವರಿಗೆ ಕಷ್ಟವಾಗಿದೆ. ಎಲ್ಲ ಆನ್ಲೈನ್ ಮಯ ಆಗಿರುವಾಗ ಕೇಂದ್ರ ಸರ್ಕಾರ ಇಂತಹ ಆನ್ಲೈನ್ ಮಾರುಕಟ್ಟೆ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ನೀಡಬೇಕು. ಆನ್ ಲೈನ್ ಮಾರುಕಟ್ಟೆ ವ್ಯವಸ್ಥೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದ ವಸ್ತುಗಳ ಮಾರಾಟವನ್ನು ನಿಷೇಧಿಸಬೇಕು.
ಸ್ಪೋಟಕ ಕಾಯ್ದೆ -1884 ರ ಪ್ರಕಾರ ಅಮೋನಿಯಂ ಉತ್ಪಾದನೆ, ಮಾರಾಟ ಹಾಗೂ ಸಂಗ್ರಹವನ್ನು 2021ರಲ್ಲಿ ನಿಷೇಧಿಸಲಾಗಿದೆ. ಅಲ್ಲದೆ, 2006ರಲ್ಲಿ ಮಾಲೇಗಾಂವ್ ಹಾಗೂ 2008ರಲ್ಲಿ ದಿಲ್ಲಿಯಲ್ಲಿ ನಡೆದ ದಾಳಿಯಲ್ಲಿ ಇದೇ ರಾಸಾಯನಿಕ ಬಳಸಲಾಗಿತ್ತು. ಇಷ್ಟೆಲ್ಲಾ ಆದರೂ ಸಹ ಅಮೆಜಾನ್ ಇಂತಹ ರಾಸಾಯನಿಕ ಮಾರಾಟ ಮಾಡುತ್ತಿರುವುದು ದೇಶದ ಭದ್ರತೆಗೆ ಅಪಾಯಕಾರಿಯಾಗಿದೆ ಎಂದು ಬಿ.ಸಿ. ಭಾರ್ತಿಯಾ ಅವರು ಹೇಳಿದರು.
ಅಮೆಜಾನ್ ವಿರುದ್ಧ ಸೂಕ್ತ ತನಿಖೆಯಾಗಬೇಕು ಹಾಗೂ ಸಂಬಂಧಿಸಿದ ಸಂಸ್ಥೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ. ಭಾರ್ತಿಯಾ ಅಭಿಪ್ರಾಯ ಪಟ್ಟಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.