ತಿರುಪತಿಯಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದೆ. ಭಕ್ತಾದಿಗಳ ಸುರಕ್ಷತೆಗಾಗಿ, ಬೆಟ್ಟದ ಮೇಲಿರುವ ದೇವಾಲಯಕ್ಕೆ ತೆರಳುವ 2 ಪಾದಚಾರಿ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಮುಂದಿನ ಆದೇಶದವರೆಗೆ ಈ ನಿಯಮಗಳು ಜಾರಿಯಲ್ಲಿದೆ ಎಂದು ತಿರುಪತಿ ತಿರುಮಲ ದೇವಸ್ಥಾನದ ಟ್ರಸ್ಟ್ ತಿಳಿಸಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ, ನೇಲ್ಲೂರು , ಚಿತ್ತೂರು ಹಾಗೂ ಕಡಪ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದೆ. ಇಲ್ಲಿನ ನದಿಗಳು ಉಕ್ಕಿ ಹರಿಯುತ್ತಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಿರಂತರವಾಗಿ ಸುರಿಯುತ್ತಿರುವ ತೀವ್ರ ಮಳೆಯಿಂದಾಗಿ ತಿರುಪತಿಯಲ್ಲಿನ ಜನಜೀವನಕ್ಕೆ ಅಡ್ಡಿ ಉಂಟಾಗಿದೆ. ತಿರುಪತಿಗೆ ಬರುವಂತಹ ಭಕ್ತಾದಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ವೆಂಕಟರಮಣನ ದೇವಾಲಯಕ್ಕೆ ಸಾಗುವ ರಸ್ತೆಗಳ ಮೇಲೆ ಕಲ್ಲು, ಮಣ್ಣು ತುಂಬಿಕೊಂಡಿದೆ. ಅವುಗಳನ್ನು ತೆರವುಗೊಳಿಸುವ ಕೆಲಸದಲ್ಲಿ ಅಧಿಕಾರಿ ,ಸಿಬ್ಬಂದಿಗಳು ನಿರತರಾಗಿದ್ದಾರೆ.
ವೆಂಕಟೇಶ್ವರನ ದರ್ಶನಕ್ಕೆ ಸಾಗುವ ಸರದಿಸಾಲಿನ ಜಾಗದಲ್ಲಿ ನೀರು ನಿಂತಿದೆ. ತಿರುಪತಿಯ ರೇಣಿಗುಂಟ ವಿಮಾನ ನಿಲ್ದಾಣ ವು ಜಲಾವೃತಗೊಂಡಿದೆ. ತಿರುಪತಿ ಹೈದರಾಬಾದ್ ಮತ್ತು ಬೆಂಗಳೂರು ವಿಮಾನಗಳು ವಾಪಸ್ ತೆರಳುವಂತೆ ಸೂಚಿಸಲಾಗಿದೆ. ದೆಹಲಿಯಿಂದ ಬರುವ ವಿಮಾನವನ್ನು ಕೂಡ ರದ್ದುಗೊಳಿಸಲಾಗಿದೆ. ಈ ವಿಷಯವನ್ನು ತಿರುಪತಿ ವಿಮಾನ ನಿಲ್ದಾಣದ ನಿರ್ದೇಶಕ ಎಸ್. ಸುರೇಶ್ ತಿಳಿಸಿದ್ದಾರೆ.
ನಾರಾಯಣ ಗಿರಿಯಲ್ಲಿರುವ ಅತಿಥಿ ಭವನದ ಮೂರು ಕೊಠಡಿಗಳು ಭೂಕುಸಿತದಿಂದ ಜಖಂ ಆಗಿವೆ. ಅಲ್ಲಿ ವಸತಿ ಹೊಂದಿದ್ದ, ಯಾತ್ರಿಕರನ್ನು ಎಸ್ ವಿ ಅತಿಥಿ ಭವನಕ್ಕೆ ಸ್ಥಳಾಂತರ ಮಾಡಲಾಗಿದೆ.
ಸ್ವರ್ಣಮುಖಿ ನದಿಯ ಪ್ರವಾಹದಿಂದಾಗಿ ತಿರುಪತಿ ಸನಿಹದ ಶ್ರೀನಿವಾಸ ಮಂಗಾಪುರದಲ್ಲಿ 2 ಆಟೋರಿಕ್ಷಾಗಳು ತೇಲಿ ಹೋಗಿದೆ. ರೇಣಿಗುಂಟ ಹೆದ್ದಾರಿಯಲ್ಲಿ ಬರುವ ಆಂಜನೇಯಪುರ ಎಂಬಲ್ಲಿನ ಸೇತುವೆಯ ಮೇಲೆ ಲಾರಿ ಒಂದು ನಿಂತ ಪರಿಣಾಮ, ವಾಹನ ಚಾಲನೆಗೆ ಅಡ್ಡಿ ಉಂಟಾಗಿದೆ.
ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಅವರು ಚಿತ್ತೂರು ಜಿಲ್ಲಾಧಿಕಾರಿಗಳಿಗೆ, ಪರಿಸ್ಥಿತಿಯ ಬಗ್ಗೆ ಪರಮರ್ಶೆ ನಡೆಸಿದ್ದಾರೆ.
ಪ್ರಸ್ತುತ ಪ್ರವಾಹದಲ್ಲಿ ಸಿಕ್ಕಿರುವ ಜನರನ್ನು ರಕ್ಷಿಸಲು ಮತ್ತು ಪುನರ್ವಸತಿ ಕಲ್ಪಿಸಲು ಆದೇಶ ನೀಡಿದ್ದಾರೆ.
